ಮಳೆಯ ಲಯವನ್ನು ಹಿಡಿದಿಡುವ ‘ತಾರಸಿ ಮಲ್ಹಾರ್’

Update: 2019-05-14 18:30 GMT

 ಕನ್ನಡದ ಖ್ಯಾತ ಕವಿ ಜಿ. ಕೆ. ರವೀಂದ್ರ ಕುಮಾರ್ ಅವರ ಲಲಿತ ಪ್ರಬಂಧ ಸಂಕಲನ ‘ತಾರಸಿ ಮಲ್ಹಾರ್’. ಇತ್ತೀಚಿನ ದಿನಗಳಲ್ಲಿ ಲಲಿತ ಪ್ರಬಂಧ ತೀವ್ರ ನಿರ್ಲಕ್ಷಕ್ಕೆ ಒಳಗಾಗಿವೆ. ಒಂದೇ ಅದು ಲಘು ಹಾಸ್ಯದ ಮಟ್ಟಕ್ಕೆ ಇಳಿದಿವೆ. ಬದುಕನ್ನು ಆಳವಾಗಿ ಕಟ್ಟಿಕೊಡುವ ಶಕ್ತಿ ಅವುಗಳಲ್ಲಿ ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ರವೀಂದ್ರ ಕುಮಾರ್, ಭಾವಗೀತೆಗಳ ದಾಟಿಯಲ್ಲಿ ಗದ್ಯ ಪ್ರಯೋಗವನ್ನು ನಡೆಸಿದ್ದಾರೆ. ಒಬ್ಬ ಕವಿ ಮಾತ್ರ ಬರೆಯಬಲ್ಲ ಪ್ರಬಂಧಗಳಿವು.
ಇಲ್ಲಿ ಒಟ್ಟು ಹನ್ನೊಂದು ಪ್ರಬಂಧಗಳಿವೆ. ‘ತಾರಸಿ ಮಲ್ಹಾರ್’ ಇದರಲ್ಲಿ ಮುಖ್ಯವಾದುದು. ಮಳೆಯ ಲಯವನ್ನು ಹಿಡಿದು ಬರೆದ ‘ತಾರಸಿ ಮಲ್ಹಾರ್’ ಮಳೆಯ ಜೊತೆಜೊತೆಗೇ ನಮ್ಮನ್ನು ಹಿಂಬಾಲಿಸುವ ಸಂಭ್ರಮಗಳ ಕ್ಷಣಗಳನ್ನು ಅವರು ಸೆರೆಹಿಡಿದಿದ್ದಾರೆ. ಮಳೆಯ ಹಿಂದಿರುವ ನಂಬಿಕೆ, ಭರವಸೆ, ಬದುಕು, ಬಾಲ್ಯ ಎಲ್ಲವನ್ನು ಬೇರೆ ಬೇರೆ ಕೋನಗಳಲ್ಲಿ ನೋಡಿ ಬರೆದ ಪ್ರಬಂಧ ಇದು. ಸಂಗೀತದ ಜೊತೆಗೆ ಬೆರೆತುಕೊಂಡ ಮಳೆಯ ಸದ್ದನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟಿದ್ದಾರೆ. ಹೊಟೇಲ್ ಎನ್ನುವ ಸಮಾನತೆಯ ಕೇಂದ್ರದ ಕುರಿತಂತೆ ‘ಉಂಡು ತಿಂದ ಪ್ರಬಂಧ’ದಲ್ಲಿ ದಾಖಲಿಸಿದ್ದಾರೆ. ಹೊಟೇಲ್‌ನ ವೈವಿಧ್ಯತೆ, ಸೊಗಡು, ರುಚಿ, ಅಲ್ಲಿನ ಜನರು ಇವೆಲ್ಲವುಗಳನ್ನು ವಿವರಿಸುತ್ತಾ ಅದರ ಸಾಮಾಜಿಕ, ಆರ್ಥಿಕ ಮುಖಗಳ ಆಳಕ್ಕಿಳಿಯುತ್ತಾರೆ. ಕುನ್ನಕುಡಿ ಅವರ ವೈಲಿನ್ ನಾದನ, ಟೀಂ ಗು ಂಜಿಗನೂ ಕ್ರಿಕೆಟ್ ತಂಡ, ನಮ್ಮ ಬದುಕಿನ ವ್ಯವಹಾರಗಳಲ್ಲಿ ಅವಿನಾಭಾವವಾಗಿ ಬೆರೆತಿರುವ ಚುಕ್ಕಿ, ಭಾಷೆಯೊಂದಿಗೆ ನಡೆಸುವ ಕಸರತ್ತು, ತುಂಟಾಟ ಹೀಗೆ ವಿವಿಧ ವಸ್ತುಗಳು ಅವರ ಪ್ರಬಂಧದಲ್ಲಿ ವಿಸ್ತಾರವಾಗುತ್ತಾ ಬದುಕಿನ ಹಲವು ದರ್ಶನಗಳನ್ನು ನೀಡುತ್ತವೆ. ‘ಪ್ರಬಂಧಕಾರನ ಅಪಾರ ಓದು, ಸೂಕ್ಷ್ಮ ನೋಟ, ಸಂಗೀತದ ನಾದ ಲಯ, ಇವೆಲ್ಲವೂ ಇಲ್ಲಿನ ಪ್ರಬಂಧಗಳ ಹೊಳಪು ಹೆಚ್ಚಿಸಿರುವ ಗುಣಗಳು’ ಎಂದು ಬರಹಗಾರ ರಘುನಾಥ ಚ.ಹ. ಅವರು ಬೆನ್ನುಡಿಯಲ್ಲಿ ಅಭಿಪ್ರಾಯ ಪಡುತ್ತಾರೆ. ಖ್ಯಾತ ಕವಿ ಅಬ್ದುಲ್ ರಶೀದ್ ಈ ಕೃತಿಗೆ ಮುನ್ನುಡಿ ಬರೆಯುತ್ತಾ ‘‘....ಗಂಭೀರ ಸ್ವಭಾವದವರೂ, ಅಷ್ಟೇ ಗಂಭೀರ ಧ್ವನಿಯ ಕವಿತೆಗಳನ್ನೂ ಬರೆದಿರುವ ರವೀಂದ್ರ ಕುಮಾರರು ಇಲ್ಲಿ ಅದು ಹೇಗೆ ಸಡಿಲಾಗಿ, ಸಲೀಸಾಗಿ ಬಯಲಲ್ಲಿ ಕ್ರಿಕೆಟ್ ಚೆಂಡೊಂದರ ಹಿಂದೆ ಲಂಗುಲಗಾಮಿಲ್ಲದೆ ಓಡುವ ಬಾಲಕನ ಹಾಗೆ, ಹಿಡಿಯಬೇಕಿದ್ದ ಬಾಲನ್ನೂ ಮರೆತು ಬದುಕಿನ ಬಿಡಿ ಬಿಡಿ ವಿವರಗಳನ್ನು ವಿವರಿಸುವುದೇ ಇಲ್ಲಿನ ಅಚ್ಚರಿ...’’ ಅಭಿಪ್ರಾಯಪಡುತ್ತಾರೆ.
ಅನನ್ಯ ಪ್ರಕಾಶನ ಮೈಸೂರು ಹೊರತಂದಿರುವ ಕೃತಿಯ ಪುಟಗಳು 120. ಮುಖಬೆಲೆ 110. ಆಸಕ್ತರು 94484 64201 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News