ಮೈತ್ರಿ ಸರಕಾರವನ್ನು ವೈಯಕ್ತಿಕ ಪ್ರತಿಷ್ಠೆ ಬಲಿ ತೆಗೆದುಕೊಳ್ಳದಿರಲಿ

Update: 2019-05-15 05:35 GMT

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರ ನಡುವಿನ ತಿಕ್ಕಾಟ ಮೈತ್ರಿ ಸರಕಾರಕ್ಕೆ ತೀವ್ರ ಮುಜುಗರವನ್ನು ಸೃಷ್ಟಿಸಿದೆ. ಇವರ ಆರೋಪ -ಪ್ರತ್ಯಾರೋಪಗಳನ್ನು ಕೇಳಿ ಮತ್ತೆ ಸಂಭ್ರಮಗೊಂಡಿರುವ ಬಿಜೆಪಿ ನಾಯಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಪ್ರಮಾಣ ವಚನಕ್ಕೆ ಪಂಚೆ, ಶಾಲು ಸಿದ್ಧಪಡಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಮತ್ತು ವಿಶ್ವನಾಥ್ ನಡುವಿನ ತಿಕ್ಕಾಟ ತೀರಾ ಖಾಸಗಿ ನೆಲೆಯನ್ನು ಹೊಂದಿದೆ. ಇದನ್ನು ಕಾಂಗ್ರೆಸ್ ಮುಖಂಡ ಮತ್ತು ಜೆಡಿಎಸ್ ಅಧ್ಯಕ್ಷರ ಹೊಯ್‌ಕೈ ಎನ್ನುವುದಕ್ಕಿಂತ ಮಾಜಿ ಅಹಿಂದ ನಾಯಕರ ನಡುವಿನ ಹಳೆ ಬಾಕಿಗಳ ವಿನಿಮಯವೆನ್ನಬಹುದು. ಇದು ಮೈತ್ರಿ ಸರಕಾರದ ಮೇಲೆ ಪರಿಣಾಮ ಬೀರುತ್ತದೆಯೆಂದು ಹೇಳಲಾಗುವುದಿಲ್ಲ. ವಿಶ್ವನಾಥ್ ಮತ್ತು ಸಿದ್ದರಾಮಯ್ಯ ಅವರ ಸ್ನೇಹ ಮತ್ತು ದ್ವೇಷ ಇಂದು ನಿನ್ನೆಯದಲ್ಲ. ಆಳದಲ್ಲಿ ಅಹಿಂದ ಸಿದ್ಧಾಂತವನ್ನು ನೆಚ್ಚಿಕೊಂಡಿರುವ ಈ ಇಬ್ಬರು ನಾಯಕರು ತಮ್ಮ ವೈಯಕ್ತಿಕ ಅಸಮಾಧಾನಗಳನ್ನು ಮೈತ್ರಿ ಸರಕಾರದ ಮೇಲೆ ಹೊರಿಸಲು ಹೊರಟಿದ್ದಾರೆ. ಸಿದ್ದರಾಮಯ್ಯ ಮೇಲೆ ಹರಿಹಾಯ್ದರೆ ಒಳಗೊಳಗೆ ಸಂಭ್ರಮಿಸುವ ನಾಯಕರು ಕಾಂಗ್ರೆಸ್‌ನೊಳಗಿದ್ದಾರೆ.

ಹಾಗೆಯೇ ಜೆಡಿಎಸ್‌ನೊಳಗೂ ಇದ್ದಾರೆ. ಕಾಂಗ್ರೆಸ್‌ನೊಳಗೆ ಸಿದ್ದರಾಮಯ್ಯ ಮತ್ತೆ ತನ್ನ ವರ್ಚಸ್ಸನ್ನು ಬಳಸಿ ನಾಯಕತ್ವವನ್ನು ಕೈಗೆತ್ತಿಕೊಳ್ಳಬಾರದು ಎನ್ನುವ ಇರಾದೆ ಆ ಪಕ್ಷದೊಳಗಿರುವ ಹಲವರಿಗಿದೆ. ಅವರೆಲ್ಲರಿಗೂ ವಿಶ್ವನಾಥ್ ಟೀಕೆಗಳು ಇಂಪಾಗಿ ಕೇಳಿಸುತ್ತಿವೆ. ಇದೇ ಸಂದರ್ಭದಲ್ಲಿ ವಿಶ್ವನಾಥ್ ವಿರುದ್ಧ ಸಿದ್ದರಾಮಯ್ಯ ನೀಡುತ್ತಿರುವ ಹೇಳಿಕೆಗಳೂ ಜೆಡಿಎಸ್‌ನೊಳಗಿರುವ ತಂದೆ ಮಕ್ಕಳಿಗೆ ಸಮಸ್ಯೆಯನ್ನು ತಂದಿಲ್ಲ. ಒಟ್ಟಿನಲ್ಲಿ ಇವರಿಬ್ಬರ ಜಗಳಗಳನ್ನು ಉಭಯ ಪಕ್ಷದ ನಾಯಕರೂ ಒಳಗೊಳಗೆ ಸಂಭ್ರಮಿಸುತ್ತಿದ್ದಾರೆ. ಜೆಡಿಎಸ್‌ನಲ್ಲಿದ್ದು ಸಿದ್ದರಾಮಯ್ಯ ಅವರು ಅಹಿಂದವನ್ನು ಸಂಘಟಿಸಿದ್ದಾಗ ಜೊತೆಗಿದ್ದವರು ವಿಶ್ವನಾಥ್. ಶೋಷಿತ ಸಮುದಾಯದ ಕುರಿತಂತೆ ಇಬ್ಬರೂ ಆಳವಾದ ತಿಳುವಳಿಕೆ ಮತ್ತು ಕಾಳಜಿಯನ್ನು ಹೊಂದಿದವರು. ವಿಶ್ವನಾಥ್, ಸಿದ್ದರಾಮಯ್ಯ ಇಬ್ಬರೂ ಅಂದಿನ ಜೆಡಿಎಸ್‌ಗೆ ಬಹುದೊಡ್ಡ ತಲೆನೋವಾಗಿ ಕಾಡಿದ್ದರು. ಪರಿಣಾಮವಾಗಿ ್ಲ ಜೆಡಿಎಸ್ ಸಿಡಿದು ಬಿಜೆಪಿಯ ಬೆಂಬಲದೊಂದಿಗೆ ಕುಮಾರಸ್ವಾಮಿ ‘ಆಕ್ಸಿಡೆಂಟಲ್ ಮುಖ್ಯಮಂತ್ರಿ’ಯಾಗಿ ಹೊರಹೊಮ್ಮಿದರು. ಬಳಿಕ ಸಿದ್ದರಾಮಯ್ಯ ಪಕ್ಷವೊಂದನ್ನು ಕಟ್ಟಲು ಮುಂದಾಗಿ, ಅದೂ ಯಶಸ್ವಿಯಾಗದೆ ಕಾಂಗ್ರೆಸ್ ಸೇರಿದರು. ಅದಾಗಲೇ ಕಾಂಗ್ರೆಸ್ ಪಕ್ಷ ಮುತ್ಸದ್ದಿ ನಾಯಕರ ಕೊರತೆಯಿಂದ ನರಳುತ್ತಿತ್ತು. ಆ ಖಾಲಿ ಜಾಗವನ್ನು ಸಿದ್ದರಾಮಯ್ಯ ಪರಿಣಾಮಕಾರಿಯಾಗಿ ತುಂಬಿದರು. ಸಿದ್ದರಾಮಯ್ಯ ಪ್ರಭಾವದಿಂದಲೇ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯಿತು. ಆದರೆ ಇದೇ ಹೊತ್ತಿನಲ್ಲಿ, ಸಿದ್ದರಾಮಯ್ಯ ಅವರ ಜೊತೆಗಿದ್ದ ವಿಶ್ವನಾಥ್ ಕಡೆಗಣಿಸಲ್ಪಟ್ಟರು. ಕಾಂಗ್ರೆಸ್‌ನೊಳಗೆ ಸಿದ್ದರಾಮಯ್ಯ ಹೊಸಬರು. ಎಲ್ಲವೂ ಅವರ ಕೈಯಲ್ಲಿರಲಿಲ್ಲ. ದಿಲ್ಲಿಯಲ್ಲಿ ಕುಳಿತು ಮೊಯ್ಲಿ, ಆಸ್ಕರ್‌ರಂತಹ ಹಿರಿಯರು ಬೆಂಗಳೂರನ್ನು ನಿಯಂತ್ರಿಸುತ್ತಿದ್ದರು. ತನ್ನವರ ಪರವಾಗಿ ಪೂರ್ಣ ಪ್ರಮಾಣದಲ್ಲಿ ಲಾಬಿ ಮಾಡುವ ಶಕ್ತಿ ಸಿದ್ದರಾಮಯ್ಯ ಅವರಲ್ಲೂ ಇರಲಿಲ್ಲ. ಸಚಿವ ಸ್ಥಾನದಿಂದ ಕಡೆಗಣಿಸಲ್ಪಟ್ಟಾಗ ವಿಶ್ವನಾಥ್ ಸಿಟ್ಟಾದರು. ಎಲ್ಲವನ್ನೂ ಸಿದ್ದರಾಮಯ್ಯ ತಲೆಗೆ ಕಟ್ಟಿ ಅವರ ವಿರುದ್ಧ ಸೇಡು ತೀರಿಸುವ ಪಣ ತೊಟ್ಟರು. ಸಿದ್ದರಾಮಯ್ಯ ತನ್ನ ಪರವಾಗಿ ಹೈಕಮಾಂಡ್ ಮುಂದೆ ಧ್ವನಿಯೆತ್ತದೆ ವಂಚಿಸಿದರು ಎನ್ನುವುದು ವಿಶ್ವನಾಥ್ ಅಭಿಪ್ರಾಯವಾಗಿತ್ತು. ಆದುದರಿಂದಲೇ ಸಿದ್ದರಾಮಯ್ಯ ವಿರುದ್ಧ ಅವರು ಕುದಿಯ ತೊಡಗಿದರು. ತನಗೆ ವಂಚಿಸಿದ ಸಿದ್ದರಾಮಯ್ಯ ಅವರ ವಿರುದ್ಧ ಯಾವ ರೀತಿಯಲ್ಲಾದರೂ ಸೇಡು ತೀರಿಸಿಕೊಳ್ಳಲೇ ಬೇಕು ಎಂಬ ಹಟಕ್ಕೆ ಬಿದ್ದರು. ಅಂದಿನಿಂದ ವಿಶ್ವನಾಥ್ ರಾಜಕೀಯ ಕೇವಲ ಸಿದ್ದರಾಮಯ್ಯ ಅವರನ್ನು ಕೇಂದ್ರೀಕರಿಸಿದೆ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲುವುದಕ್ಕೆ ವಿಶ್ವನಾಥ್ ಕೊಡುಗೆಯೂ ಇದೆ. ಆದರೆ ಆ ಸೋಲಿನಿಂದ ಇನ್ನೂ ತೃಪ್ತರಾಗಿಲ್ಲ ಎನ್ನುವುದು ಇತ್ತೀಚಿನ ಅವರ ಮಾತಿನಿಂದ ಗೊತ್ತಾಗುತ್ತದೆ.

ವಿಶ್ವನಾಥ್ ಅದೇನೇ ಹೇಳಲಿ. ಸಿದ್ದರಾಮಯ್ಯ ಅವರು ತನ್ನ ಅಧಿಕಾರಾವಧಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎನ್ನುವುದನ್ನು ಅವರ ಶತ್ರುಗಳೂ ಒಪ್ಪಿಕೊಳ್ಳುತ್ತಾರೆ. ಒಬ್ಬ ನಾಯಕ ಉತ್ತಮ ಆಡಳಿತ ಕೊಟ್ಟ ಕಾರಣಕ್ಕೆ ಚುನಾವಣೆಯಲ್ಲಿ ಗೆಲ್ಲಬೇಕು ಎಂದಿಲ್ಲ. ಇಷ್ಟಕ್ಕೂ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಸೋಲಿಸಿದ್ದು ಮತದಾರರಲ್ಲ, ಅವರ ಜೊತೆಗಿರುವ ನಾಯಕರು ಒಳಗಿಂದೊಳಗೆ ದ್ರೋಹ ಬಗೆದರು. ಸಿದ್ದರಾಮಯ್ಯ ಮತ್ತೆ ಗೆದ್ದರೆ ಮುಖ್ಯಮಂತ್ರಿ ಪದವಿಯನ್ನು ಅವರಿಂದ ಕಿತ್ತುಕೊಳ್ಳುವುದು ಸಾಧ್ಯವಿಲ್ಲ ಎನ್ನುವುದು ಡಿಕೆಶಿ, ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್‌ನೊಳಗಿರುವ ಹಲವು ನಾಯಕರಿಗೆ ತಿಳಿದಿತ್ತು. ಆದುದರಿಂದಲೇ ಎಲ್ಲರೂ ಜೊತೆ ಸೇರಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯರನ್ನು ಸೋಲಿಸಿದರು. ಬಾದಾಮಿಯಲ್ಲಿ ಕೂದಲೆಳೆಯಿಂದ ಸೋಲಿನಿಂದ ಪಾರಾದರು. ಡಿಕೆಶಿ ತನ್ನ ಹಣ ಬಲದಿಂದ ಕಾಂಗ್ರೆಸ್‌ನಲ್ಲಿ ಬೇರಿಳಿಸಿಕೊಂಡಿದ್ದಾರೆ. ಪರಮೇಶ್ವರ್ ಸಂದರ್ಭ ಬಂದಾಗ ದಲಿತ ಎನ್ನುವ ನಾಣ್ಯವನ್ನು ಬಳಸುತ್ತಾರೆ. ಆದರೆ ಸಿದ್ದರಾಮಯ್ಯ ಹಣ ಬಲವಿಲ್ಲದ, ಸಿದ್ಧಾಂತದ ಮೇಲೆ ಬಲವಾದ ನಂಬಿಕೆಯನ್ನು ಹೊಂದಿರುವ ಏಕೈಕ ಮುತ್ಸದ್ದಿ ರಾಜಕಾರಣಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೋ, ಬಿಡುತ್ತಾರೋ ಆದರೆ ಮುಖ್ಯಮಂತ್ರಿಯಾಗುವ ಅರ್ಹತೆಯಂತೂ ಅವರಿಗಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ವಿರುದ್ಧ ಹಗುರ ಹೇಳಿಕೆಗಳನ್ನು ನೀಡಿದಷ್ಟೂ ವಿಶ್ವನಾಥ್ ಅವರೇ ಸಣ್ಣವರಾಗುತ್ತಾರೆ. ಇಂದು ನಾಡು, ದೇಶ ರಾಜಕೀಯವಾಗಿ ಹತ್ತು ಹಲವು ಸವಾಲುಗಳನ್ನು ಎದುರಿಸುತ್ತಿರುವಾಗ, ಶೋಷಿತವರ್ಗದ ವಿರುದ್ಧ ಕೋಮುವಾದಿ ರಾಜಕಾರಣ ಗೆಲುವು ಸಾಧಿಸುತ್ತಿರುವಾಗ ವಿಶ್ವನಾಥ್ ಅವರು ತನ್ನ ಏಕೈಕ ಶತ್ರು ಸಿದ್ದರಾಮಯ್ಯ ಎಂದು ಭಾವಿಸಿ ರಾಜಕೀಯ ನಡೆಸುವುದು ಅತ್ಯಂತ ವಿಷಾದನೀಯವಾಗಿದೆ. ಹಾಗೆಯೇ, ವಿಶ್ವನಾಥ್ ಅವರ ಮಾತುಗಳ ಉದ್ದೇಶವೇನು ಎನ್ನುವುದು ಗೊತ್ತಿದ್ದೂ ಸಿದ್ದರಾಮಯ್ಯ ಅದನ್ನು ಗಂಭೀರವಾಗಿ ಸ್ವೀಕರಿಸಿ ಪ್ರತಿಕ್ರಿಯಿಸುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ವಿಶ್ವನಾಥ್‌ರಂತಹ ಮಾಜಿ ಸ್ನೇಹಿತ, ಹಾಲಿ ಶತ್ರುಗಳು ಸಿದ್ದರಾಮಯ್ಯನವರಿಗೆ ಬಹಳಷ್ಟು ಮಂದಿ ಇದ್ದಾರೆ. ಈ ಶತ್ರುತ್ವಕ್ಕೆ ಯಾವುದೇ ನಿರ್ದಿಷ್ಟ ಸಿದ್ಧಾಂತವಿಲ್ಲ. ವೈಯಕ್ತಿಕ ಪ್ರತಿಷ್ಠೆಯ ಕಾರಣದಿಂದ ಹುಟ್ಟಿರುವ ಇಂತಹ ಶತ್ರುಗಳನ್ನು ನಿರ್ಲಕ್ಷಿಸಿ ಮುಂದೆ ಸಾಗುವುದು ಸಿದ್ದರಾಮಯ್ಯ ಅವರ ಮಟ್ಟಿಗೆ ಮುತ್ಸದ್ದಿ ನಿರ್ಧಾರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News