33 ತಿಂಗಳಲ್ಲೇ ಗರಿಷ್ಠ ಮಟ್ಟ ತಲುಪಿದ ಆಹಾರ ಹಣದುಬ್ಬರ

Update: 2019-05-15 03:41 GMT

ಹೊಸದಿಲ್ಲಿ, ಮೇ 15: ಸಗಟು ಬೆಲೆ ಸೂಚ್ಯಂಕ ಮಾಪನದಲ್ಲಿ ಎಪ್ರಿಲ್ ತಿಂಗಳಲ್ಲಿ ಹಣದುಬ್ಬರ ಮಂದವಾಗಿದ್ದರೂ, ಆಹಾರ ಹಣದುಬ್ಬರ ಮಾತ್ರ 33 ತಿಂಗಳಲ್ಲೇ ಗರಿಷ್ಠ ಮಟ್ಟವನ್ನು ಅಂದರೆ 7.4% ತಲುಪಿದೆ. ತರಕಾರಿ, ಆಹಾರಧಾನ್ಯಗಳು, ಗೋಧಿ ಮತ್ತು ಬೇಳೆಕಾಳುಗಳ ಬೆಲೆ ಅಧಿಕವಾಗಿರುವುದು ಆಹಾರ ಹಣದುಬ್ಬರ ಗಗನಮುಖಿಯಾಗಲು ಕಾರಣ.

ವಾಣಿಜ್ಯ ಮತ್ತು ಕೈಗಾರಕಾ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಸಗಟು ಬೆಲೆ ಸೂಚ್ಯಂಕದ ಅನ್ವಯ ವಾರ್ಷಿಕ ಹಣದುಬ್ಬರ ದರ ಎಪ್ರಿಲ್‌ನಲ್ಲಿ 3.1% ಆಗಿದೆ. ಹಿಂದಿನ ತಿಂಗಳಲ್ಲಿ ಇದು 3.2% ಇದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 3.6% ಆಗಿತ್ತು.

ಆಹಾರ ಹಣದುಬ್ಬರದಲ್ಲಿ ತೀವ್ರ ಹೆಚ್ಚಳವಾಗಿರುವುದು ತಕ್ಷಣ ಅಪಾಯಕಾರಿ ಅಲ್ಲದಿದ್ದರೂ, ನೈರುತ್ಯ ಮುಂಗಾರು ಮಳೆಯ ಪ್ರಮಾಣ, ಅಂತಿಮವಾಗಿ ಆಹಾರ ಬೆಲೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

"2018ರ ತೀವ್ರ ಬೆಲೆ ಕುಸಿತದಿಂದ ಆಹಾರ ಬೆಲೆಗಳು ಚೇತರಿಸಿಕೊಳ್ಳುತ್ತಿವೆ. ಇದು ಖಂಡಿತಾ ಅಪಾಯದ ಸೂಚನೆಯಲ್ಲ. ಇದು ರೈತರಿಗೆ ಒಳ್ಳೆಯ ಸುದ್ದಿ. ಗ್ರಾಹಕರಿಗೆ ಚಿಲ್ಲರೆ ಬೆಲೆಯಲ್ಲಿ ಸ್ವಲ್ಪ ಹೆಚ್ಚಳವಾದರೂ, ಸರ್ಕಾರ ತನ್ನಲ್ಲಿ ದಾಸ್ತಾನು ಇರುವ ಗೋಧಿ ಹಾಗೂ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಸುಲಭವಾಗಿ ಬೆಲೆ ನಿಯಂತ್ರಿಸಬಹುದು" ಎಂದು ಇನ್ಫೋಸಿಸ್ ಕೃಷಿ ಪೀಠದ ಅಧ್ಯಕ್ಷ ಅಶೋಕ್ ಗುಲಾಟಿ ಅಭಿಪ್ರಾಯಪಟ್ಟಿದ್ದಾರೆ.

2018ರ ಜುಲೈನಿಂದ ಡಿಸೆಂಬರ್ ವರೆಗೂ ಬೆಲೆಗಳು ಇಳಿದ ಬಳಿಕ ಆಹಾರ ಬೆಲೆಗಳು ಕಳೆದ ನಾಲ್ಕು ತಿಂಗಳಲ್ಲಿ ಸುಸ್ಥಿರವಾಗಿ ಹೆಚ್ಚುತ್ತಿವೆ. "ಇದು ಆಹಾರ ವಸ್ತುಗಳ ಹಣದುಬ್ಬರ ಕುಸಿತ ಮರೆಯಾಗುತ್ತಿರುವುದರ ಸೂಚಕ" ಎಂದು ಕೇರ್ ರೇಟಿಂಗ್ಸ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವೀಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News