ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಯ ಆತ್ಮಹತ್ಯೆಯಿಂದ ಆಘಾತ: ಈ ಐಎಎಸ್ ಅಧಿಕಾರಿ ಮಾಡಿದ್ದೇನು ಗೊತ್ತಾ?

Update: 2019-05-15 12:30 GMT

ರಾಯಪುರ್, ಮೇ 15: ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚು ಅಂಕ ಗಳಿಸುವುದೇ ವಿದ್ಯಾರ್ಥಿಗಳಿಗೆ ಅದೆಷ್ಟು ಮುಖ್ಯವಾಗಿದೆಯೆಂದರೆ  ಕಡಿಮೆ ಅಂಕ ದೊರೆಯಿತೆಂದು ಹಲವರು ನಿರಾಸೆಗೊಂಡು ಪ್ರಾಣ ಕೂಡ ಕಳೆದುಕೊಳ್ಳುತ್ತಾರೆ. ಆದರೆ ಉತ್ತಮ ಅಂಕಗಳು ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂಬುದಕ್ಕೆ ಒಬ್ಬ ಐಎಎಸ್ ಅಧಿಕಾರಿಯ ಅಂಕ ಪಟ್ಟಿಯೇ ಸಾಕ್ಷಿ.

ಛತ್ತೀಸಗಢ್ ಬೋರ್ಡ್ ಪರೀಕ್ಷೆ ಫಲಿತಾಂಶ ಕಳೆದ ವಾರ ಪ್ರಕಟಗೊಂಡ ನಂತರ `ನಿರೀಕ್ಷಿಸಿದ ಅಂಕಗಳು' ಬಂದಿಲ್ಲ ಎಂದು ಬೇಸರಗೊಂಡು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ತಿಳಿದು ಆಘಾತಗೊಂಡ ರಾಜ್ಯದ ಐಎಎಸ್ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದ ಮೂಲಕ ವಿದ್ಯಾರ್ಥಿಗಳಿಗೊಂದು ಸಂದೇಶ ನೀಡಿದ್ದಾರಲ್ಲದೆ ಇನ್ನಷ್ಟು ಶ್ರಮ ವಹಿಸುವಂತೆ ಕರೆ ನೀಡಿದ್ದಾರೆ.

2009ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಹಾಗೂ ಕವರ್ಧ ಜಿಲ್ಲಾ ಕಲೆಕ್ಟರ್ ಆಗಿರುವ ಅವನೀಶ್ ಶರ್ಮ ತಮ್ಮ ಸ್ಫೂರ್ತಿದಾಯಕ ಫೇಸ್ ಬುಕ್ ಪೋಸ್ಟ್ ನಲ್ಲಿ ಫಲಿತಾಂಶಗಳನ್ನು  ಗಂಭೀರವಾಗಿ ಪರಿಗಣಿಸಬೇಡಿ ಎಂಬ ಸಲಹೆಯನ್ನು ವಿದ್ಯಾರ್ಥಿಗಳು ಹಾಗೂ ಹೆತ್ತವರಿಗೆ ನೀಡಿದ್ದಾರೆ.

``ಇದು ಕೇವಲ ಸಂಖ್ಯೆಗಳ ಆಟ. ನಿಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಲು ನಿಮಗೆ ಇನ್ನೂ ಹಲವು ಅವಕಾಶಗಳು ದೊರೆಯುತ್ತವೆ. ಮುಂದಕ್ಕೆ ಸಾಗುತ್ತಿರಿ'' ಎಂದು ಶರಣ್ ಫೇಸ್ ಬುಕ್ ಪುಟದಲ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲ ತಮ್ಮ 10ನೇ, 12ನೇ ತರಗತಿ ಹಾಗೂ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಶೇರ್ ಮಾಡಲೂ ಅವರು ಹಿಂಜರಿಕೆ ತೋರಿಲ್ಲ. ಈ ಐಎಎಸ್ ಅಧಿಕಾರಿ ತಮ್ಮ 10ನೇ ತರಗತಿ ಪರೀಕ್ಷೆಯಲ್ಲಿ ಶೇ 44.5,  12ನೇ ತರಗತಿ ಪರೀಕ್ಷೆಯಲ್ಲಿ ಶೇ 65 ಹಾಗೂ ಪದವಿ ಪರೀಕ್ಷೆಯಲ್ಲಿ ಶೇ 60.7 ಅಂಕಗಳನ್ನು ಪಡೆದಿದ್ದರು.

“ಇಂದು ಆಯ್ಕೆಗಳು ಸೀಮಿತವಾಗಿಲ್ಲ ಹಾಗೂ  ವಿದ್ಯಾರ್ಥಿಗಳು ಶ್ರಮ ವಹಿಸಿದ ಹಾಗೆ ಅವಕಾಶಗಳು ಬರುತ್ತಲೇ ಇರುತ್ತವೆ. ನಿಮ್ಮ ಶಾಲೆಯ ಪರೀಕ್ಷೆಯಲ್ಲಿನ ಅಂಕಗಳೇ ನಿಮ್ಮ ಭವಿಷ್ಯವನ್ನು ನಿರ್ಧರಿಸಲು ಏಕೆ ಅನುಮತಿಸಬೇಕು? ಫರೀಕ್ಷೆ ಫಲಿತಾಂಶಗಳು ಜಗತ್ತಿನ ಅಂತ್ಯವಲ್ಲ” ಎಂದು ಶರಣ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News