ಶಿವಮೊಗ್ಗ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ

Update: 2019-05-15 18:32 GMT

ಶಿವಮೊಗ್ಗ, ಮೇ 15: ಶಿವಮೊಗ್ಗ ಜಿಲ್ಲೆಯ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ಮುಂದುವರಿಯಲಿದೆ. ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ಪ್ರಕಟಿಸಿವೆ. 

ಈ ಸಂಬಂಧ ಬುಧವಾರ ನಗರದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್‍ರವರು ಜಂಟಿ ಸುದ್ದಿಗೋಷ್ಠಿ ನಡೆಸಿ, ಮೈತ್ರಿ ವಿಷಯವನ್ನು ದೃಢಪಡಿಸಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ನಿರ್ಧಾರ ಕೈಗೊಂಡಿದ್ದಾರೆ. 

'ಮೇ 29 ರಂದು ನಡೆಯಲಿರುವ ಸಾಗರ ನಗರಸಭೆ, ಶಿಕಾರಿಪುರ ಪುರಸಭೆ, ಹೊಸನಗರ, ಶಿರಾಳಕೊಪ್ಪ ಪಟ್ಟಣ ಪಂಚಾಯ್ತಿಗಳ ವಾರ್ಡ್ ಚುನಾವಣೆಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಹಾಗೂ ವರಿಷ್ಠರ ಸೂಚನೆಯಂತೆ ಮೈತ್ರಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತಂತೆ ಎರಡೂ ಪಕ್ಷದ ನಾಯಕರು ಸಮಾಲೋಚನೆ ನಡೆಸಿದ್ದೆವೆ' ಎಂದು ಎರಡೂ ಪಕ್ಷದ ಜಿಲ್ಲಾಧ್ಯಕ್ಷರು ಮಾಹಿತಿ ನೀಡಿದ್ದಾರೆ. 

ಹೊಂದಾಣಿಕೆಯಲ್ಲಿ ಸಣ್ಣಪುಟ್ಟ ಗೊಂದಲಗಳು ಬರಬಹುದು. ಆದರೆ ಅವುಗಳನ್ನೆಲ್ಲ ಸಮರ್ಥವಾಗಿ ಪರಿಹರಿಸಿಕೊಳ್ಳಲಾಗುವುದು. ಎರಡೂ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಆಕಾಂಕ್ಷಿಗಳ ಜೊತೆ ಕುಳಿತು ಚರ್ಚಿಸಿ ಮೈತ್ರಿ ನಿರ್ಧಾರ ಕೈಗೊಳ್ಳಲಾಗಿದೆ. ಜಂಟಿಯಾಗಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. 

ಮೈತ್ರಿಯಿಂದ ಜಾತ್ಯತೀತ ಮತಗಳ ದೃವೀಕರಣ ಸಾಧ್ಯವಾಗಲಿದೆ. ಇದರಿಂದ ಅತ್ಯದಿಕ ವಾರ್ಡ್‍ಗಳಲ್ಲಿ ಮೈತ್ರಿ ಅಭ್ಯಥಿಗಳು ಜಯ ಸಾಧಿಸಲಿದ್ದಾರೆ. ಆಡಳಿತ ಚುಕ್ಕಾಣಿ ಹಿಡಿಯಲು ಸಹಕಾರಿಯಾಗಲಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಇದೇ ಮೈತ್ರಿ ಮುಂಬರುವ ಭದ್ರಾವತಿ ನಗರಸಭೆ ಹಾಗೂ ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿಯೂ ಮುಂದುವರಿಸುವ ಕುರಿತಂತೆ ಎರಡೂ ಪಕ್ಷಗಳ ಮುಖಂಡರು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಎರಡೂ ಪಕ್ಷದ ಜಿಲ್ಲಾಧ್ಯಕ್ಷರು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News