ಕೊಳ್ಳೇಗಾಲ: ರಜಾಮಜಾ - 2019 ಮಕ್ಕಳ ಶಿಬಿರ

Update: 2019-05-15 18:35 GMT

ಕೊಳ್ಳೇಗಾಲ,ಮೇ15:  ಮಕ್ಕಳಿಗೆ ಪರಿಸರದ ಬಗ್ಗೆ, ಜೀವ ವೈವಿಧ್ಯತೆ ಬಗ್ಗೆ, ಪ್ರಾಣಿ - ಪಕ್ಷಿಗಳ ಬಗ್ಗೆ  ಪ್ರತಿಯೊಬ್ಬ ಮಕ್ಕಳು ತಿಳಿದುಕೊಳ್ಳಬೇಕು ಎಂದು  ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಶ್ರೀ ಏಳುಕೊಂಡಲರವರು ತಿಳಿಸಿದರು.

ಪಟ್ಟಣದ ವಿಶ್ವ ಚೇತನ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ನಟನ ರಂಗ ಶಾಲೆ ನಡೆಸುತ್ತಿರುವ ರಜಾಮಜಾ - 2019 ಮಕ್ಕಳ ಶಿಬಿರದಲ್ಲಿ ಭಾಗವಹಿಸಿ, ಮಕ್ಕಳೊಂದಿಗೆ ಮಾತನಾಡಿದ ಅವರು  ಕಾಡಿದ್ದರೆ ನಾಡು ಎಂಬ ನುಡಿಗಟ್ಟು ನಿಮಗೆಲ್ಲಾ ಗೊತ್ತೆ ಇದೆ. ಆದರೆ ನಾವು ಇಂದು ಕಾಡನ್ನು ಉಳಿಸುವ ಬದಲು ನಾಶ ಮಾಡುವ ಕೆಲಸವನ್ನು ಮಾಡುತ್ತಾ ಇದ್ದೇವೆ. ಇದಕ್ಕೆ ಕಾರಣ ನಾವೆಲ್ಲರೂ ಪರಿಸರದ ಬಗ್ಗೆ ಸರಿಯಾಗಿ ತಿಳುವಳಿಕೆ ಹೊಂದಿದೆ ಇರುವುದಾಗಿದೆ. ನಿಸರ್ಗದ ಉಳಿವಿಗೆ ಪ್ರತಿಯೊಬ್ಬ ನಾಗರೀಕರು ಶ್ರಮಿಸಬೇಕು. ಎಂದು ತಿಳಿಸಿದರು.

ಪ್ರಕೃತಿಯನ್ನು ಉಳಿಸುವುದು, ಕಾಪಾಡುವುದು ನಮ್ಮ - ನಿಮ್ಮೆಲ್ಲರ ಕರ್ತವ್ಯವು ಹೌದು. ನಮ್ಮ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಡಿದ್ದರೂ ಸಹ, ನಾವೆಲ್ಲರೂ ಮಳೆ ಇಲ್ಲದೆ, ಬರದಿಂದ ತತ್ತರಿಸುವ ಪರಿಸ್ಥಿತಿಯನ್ನು ಎದುರಿಸುತ್ತಾ ಇದ್ದೇವೆ. ಹಾಗಾಗಿ ಮಕ್ಕಳು ಶಾಲೆಯಲ್ಲಿ ಓದುತ್ತಿರುವಾಗಲೇ ಪರಿಸರದ ಬಗ್ಗೆ, ಕಾಡು - ಕಾಡು ಪ್ರಾಣಿಗಳ ಬಗ್ಗೆ, ವಿವಿಧ ಜೀವಿಗಳ ಬಗ್ಗೆ, ಅವುಗಳ ಜೀವನದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು. ನಾವೆಲ್ಲರೂ ಕಾಡನ್ನು ಸಂರಕ್ಷಿಸಲು ಇತರರಿಗೆ ಪ್ರೇರೇಪಿಸಬೇಕು. ಕಾಡಿಗೆ ಹೋಗಿ ಮೋಜು - ಮಸ್ತಿ ಮಾಡದಂತೆ, ಪ್ಲಾಸ್ಟಿಕ್ ವಸ್ತುಗಳನ್ನು, ತ್ಯಾಜ್ಯವನ್ನು ಕಾಡಿನಲ್ಲಿ ಹಾಕದಂತೆ ತಿಳಿಸಿಹೇಳಬೇಕು. ಕಾಡಿಗೆ ಬೆಂಕಿ ಹಚ್ಚಬಾರದು. ಅಕಸ್ಮಾತ್ ಕಾಡಿಗೆ ಬೆಂಕಿ ಬಿದ್ದಿರುವುದು ಕಂಡರೆ ಕೂಡಲೇ ಅರಣ್ಯ ಇಲಾಖೆಯವರಿಗೆ ತಿಳಿಸಬೇಕು ಮತ್ತು ಬೆಂಕಿ ನಂದಿಸಲು ಅವರಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ಬೀಜದ ಉಂಡೆಗಳನ್ನು ಮಾಡುವ ಪ್ರಾತ್ಯಕ್ಷಿಕೆಯನ್ನು ತೋರಿಸಿ, ಅವರಿಂದ ಬೀಜದ ಉಂಡೆಗಳನ್ನು ಮಾಡಿಸಲಾಯಿತು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಮಹಾದೇವ ಬಿ ಎಸ್ ಮಾತನಾಡುತ್ತಾ, ಕೃಷಿಗೆ ನೀರು ಬಹುಮುಖ್ಯವಾದ ಅಂಶ. ನೀರಿಲ್ಲದಿದ್ದರೆ ಕೃಷಿಯು ಇಲ್ಲ. ಅದ್ದರಿಂದ ಪ್ರತಿಯೊಬ್ಬರು ತಮ್ಮ ಮನೆ - ಜಮೀನುಗಳಲ್ಲಿ ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸಿ, ಬೆಳೆಸಬೇಕು ಎಂದು ಕರೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ನಮ್ಮ ಜನರು ಕೃಷಿಯಿಂದ ವಿಮುಖರಾಗುತ್ತಿರುವುದು ವಿಪರ್ಯಾಸವೇ ಸರಿ. ಇಂದು ನಾವೆಲ್ಲರೂ ನಮ್ಮ ಮಕ್ಕಳಿಗೆ ಕೃಷಿ ಚಟುವಟಿಕೆ ಬಗ್ಗೆ, ಬೆಳೆಗಳನ್ನು ಬೆಳೆಯುವ ಬಗ್ಗೆ ಯಾವುದೇ ತರಹದ ಜ್ಞಾನವನ್ನು ನೀಡುತ್ತಿಲ್ಲ. ಅದ್ದರಿಂದ ಮಕ್ಕಳಿಗೆ ಕೃಷಿ ಎಂದರೆ ಏನು ಎಂಬುದನ್ನು ನಾವು ಮೊದಲು ತಿಳಿಸಿಕೊಡಬೇಕಿದೆ ಎಂದರು. ರಾಗಿ ಗಿಡವನ್ನು ತಂದು, ಅದು ಬೆಳೆಯುವ ವಿವಿಧ ಮಜಲುಗಳನ್ನು ತೋರಿಸುತ್ತಾ, ಅದರ ಬೇರುಗಳು, ಕಾಂಡ, ಎಲೆ - ಕಡ್ಡಿ ಮತ್ತು ತೆನೆಯ ಬಗ್ಗೆ ಮಕ್ಕಳಿಗೆ ಸಂಪೂರ್ಣ ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಮೈಸೂರು ಆಕಾಶವಾಣಿಯ ಸುಬ್ರಹ್ಮಣ್ಯ, ವೀರಭದ್ರಸ್ವಾಮಿ, ಎಸ್, ನಟನ ರಂಗಶಾಲೆಯ ಕಲಾವಿದರು, ಲೋಕೇಶ್, ಮಹಾದೇವ, ಮುಡಿಗುಂಡ ಪ್ರಸಾದ್, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ಕೃಷಿ ಇಲಾಖೆಯ ಸಿಬ್ಬಂದಿ ವರ್ಗ, ಮಕ್ಕಳು ಮತ್ತಿತರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News