ಆರೋಪ ಸಾಬೀತುಪಡಿಸಿದರೆ ರಾಜಕೀಯ ತ್ಯಾಗ ಸಿದ್ದ: ಕೆ.ಬಿ.ಚಂದ್ರಶೇಖರ್ ಗೆ ಕೆ.ಸಿ.ನಾರಾಯಣಗೌಡ ಸವಾಲು

Update: 2019-05-15 18:41 GMT

ಮಂಡ್ಯ, ಮೇ 15: ಮಹಾರಾಷ್ಟ್ರದಲ್ಲಿ ನನ್ನ ಮೇಲೆ ಎರಡೇ ಎರಡು ಆರೋಪ ಸಾಬೀತು ಮಾಡಲಿ. ನಾನು ರಾಜಕಾರಣ ತ್ಯಾಗ ಮಾಡುತ್ತೇನೆ. ಇವರ ಮೇಲಿನ ಆರೋಪಕ್ಕೆ ನಾನು ಸಾಕ್ಷಿ ಕೊಡುತ್ತೇನೆ. ಅವರು ರಾಜಕಾರಣ ಬಿಡುತ್ತಾರ ಎಂದು ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‍ಗೆ ಸವಾಲು ಹಾಕಿದ್ದಾರೆ.

ನಾನು ಮಹಾರಾಷ್ಟ್ರಕ್ಕೆ ಹೊಟ್ಟೆ ಬಟ್ಟೆಗಾಗಿ ದುಡಿಯಲು ಹೋಗಿದ್ದೆ. ಇಂದು ಉದ್ಯಮಿ ಆಗಿದ್ದೇನೆ. ಪುನಃ ಜನ್ಮಭೂಮಿಗೆ ಬಂದಿದ್ದೇನೆ. ನಾನು ಮಹಾರಾಷ್ಟ್ರದಲ್ಲಿ ನೂರಾರು ಕೆಟ್ಟ ಕೆಲಸ ಮಾಡಿದ್ದೇನೆಂಬುದನ್ನು ಚಂದ್ರಶೇಖರ್ ಸಾಬೀತುಪಡಿಸಲಿ ಎಂದು ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತಾನು ಆಪರೇಷನ್ ಕಮಲಕ್ಕೆ ಬಿಜೆಪಿಯಿಂದ 10 ಕೋಟಿ ರೂ. ಪಡೆದಿರುವುದಾಗಿ ಕೆ.ಬಿ.ಚಂದ್ರಶೇಖರ್ ಹೇಳಿದ್ದಾರೆ. ಯಡಿಯೂರಪ್ಪ ಸರಕಾರ ಇದ್ದಾಗ ಅವರೇ ಬಿಜೆಪಿಗೆ ಸೇರಲು ಹೊರಟಿದ್ದು, ಅದನ್ನು ನನ್ನ ಮೇಲೆ ಹಾಕುತ್ತಿದ್ದಾರೆ ಎಂದು ಅವರು ಪ್ರತ್ಯಾರೋಪ ಮಾಡಿದರು.
ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡಿದ್ದನ್ನು ಎಲ್ಲರು ನೋಡಿದ್ದಾರೆ. ಹಳ್ಳಿಗಳಿಗೆ ಹೋಗಿ ಸುಮಲತಾ ಬರುತ್ತಿದ್ದಾರೆ ಎಂದು  ಹಣ ಹಂಚಿಕೆ ಮಾಡಿ ಪಟಾಕಿ ಹೊಡೆಸಲು ವ್ಯವಸ್ಥೆ ಮಾಡಿದ್ದಾರೆ. ಧೈರ್ಯ ಇದ್ದರೆ ನೇರವಾಗಿ ಮಾಡಿ ಫೇಸ್ ಮಾಡಬೇಕು. ಸುಮ್ಮನೆ ಸುಳ್ಳು ಹೇಳಬಾರದು ಎಂದು ಅವರು ತಿರುಗೇಟು ನೀಡಿದರು.

ಕುಮಾರಸ್ವಾಮಿ ಬಂದು ಕೇಳಿದ್ದರೆ ನಿಖಿಲ್ ಪರ ಪ್ರಚಾರಕ್ಕೆ ಹೋಗುತ್ತಿದ್ದೆ ಎನ್ನುತ್ತಾರೆ. ಕುಮಾರಸ್ವಾಮಿ ಅವರ ಅಣ್ಣ ಸಚಿವ ರೇವಣ್ಣ ಅವರೇ ಆಹ್ವಾನ ನೀಡಿದ್ದಾರೆ. ಆದರೂ ಬರಲಿಲ್ಲ. ಏಕೆಂದರೆ ಚಂದ್ರಶೇಖರ್‍ಗೆ ನಿಖಿಲ್ ಪರ ಪ್ರಚಾರ ಮಾಡಲು ಇಷ್ಟವಿರಲಿಲ್ಲ ಎಂದು ಅವರು ಹೇಳಿದರು.
ಚಂದ್ರಶೇಖರ್ ಕೆ.ಆರ್.ಪೇಟೆಯಲ್ಲಿ ಅಕ್ರಮ ಆಸ್ತಿ ಮಾಡಿ ಬಗ್ಗೆ ತನಿಖೆಗೆ ಒತ್ತಾಯಿಸಿದ್ದೆ. ಆದರೆ, ಕಳೆದ ಬಾರಿ ಕಾಂಗ್ರೆಸ್ ಸರಕಾರವಿದ್ದ ಕಾರಣ ಅದನ್ನು ಮುಚ್ಚಿ ಹಾಕಿದರು. ಈ ಬಾರಿ ಮೈತ್ರಿ ಇದೆ ಎಂದು ಸುಮ್ಮನಾಗಿದ್ದೆ. ಈ ರೀತಿ ಕೆಣಕುತ್ತಿರುವುದರಿಂದ ಅದು ಓಪನ್ ಆಗುತ್ತೆ ಎಂದು ಅವರು ತಿಳಿಸಿದರು.

ಕೆ.ಆರ್.ಪೇಟೆ ಪುರಸಭೆ ಚುನಾವಣೆಯಲ್ಲಿ ಇವರಿಗೆ ಹಿನ್ನಡೆಯಾಗುವ ಭಯದಿಂದ ಈ ರೀತಿ ಮಾತನಾಡುತ್ತಿದ್ದಾರೆ. ಮೇಲ್ಮಟ್ಟದಲ್ಲಿ ಮೈತ್ರಿ ಇದ್ದರೂ ನಮ್ಮ ತಾಲೂಕಲ್ಲಿ ಇವರು ಮಾಡಿರುವ ಕರ್ಮ, ಲೂಟಿಯನ್ನು ನಾವು ಒಪ್ಪಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News