ಪುರಾವೆಯಾಗಿದ್ದ 2 ಲಕ್ಷ ರೂ. ನಗದು ಕೋರ್ಟ್ ಒಳಗಿನಿಂದಲೇ ಕಳವು !

Update: 2019-05-16 04:04 GMT

ಹೊಸದಿಲ್ಲಿ: ಲಂಚ ಹಗರಣದಲ್ಲಿ ಅಧಿಕಾರಿಯೊಬ್ಬನನ್ನು ಬಲೆಗೆ ಬೀಳಿಸಲು ನೆರವಾದ ಎರಡು ಲಕ್ಷ ರೂ. ಮೌಲ್ಯದ ನೋಟಿನ ಕಂತೆ, ಅತ್ಯಂತ ಸುರಕ್ಷಿತ ತಾಣ ಎನ್ನಲಾದ ನ್ಯಾಯಾಲಯದಿಂದಲೇ ಕಳವಾದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಈ ಪ್ರಕರಣದಲ್ಲಿ ಮಹತ್ವದ ಪುರಾವೆ ಎನ್ನಲಾಗಿದ್ದ ನೋಟಿನ ಕಂತೆಯನ್ನು ನ್ಯಾಯಾಲಯ ಸಿಬ್ಬಂದಿಯೇ ಕಳವು ಮಾಡಿದ್ದಾರೆ ಎಂದು ಆಪಾದಿಸಲಾಗಿದ್ದು, ಕೊನೆಗೂ ನ್ಯಾಯಾಧೀಶರ ಚೇಂಬರ್ ಪಕ್ಕದ ಕೊಠಡಿಯಿಂದ ನೋಟಿನ ಕಂತೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೇಂದ್ರ ದೆಹಲಿಯ ಆದಾಯ ತೆರಿಗೆ ಕಚೇರಿ ಬಳಿ ಇತ್ತೀಚೆಗೆ ಉದ್ಘಾಟನೆಯಾದ ರೋಸ್ ಅವೆನ್ಯೂ ಕೋರ್ಟ್‌ನಲ್ಲಿ ಈ ಅಪರೂಪದ ಘಟನೆ ನಡೆದಿದೆ. ವಿಶೇಷ ಸಿಬಿಐ ನ್ಯಾಯಾಧೀಶ ವಿಮಲ್ ಕುಮಾರ್ ಯಾದವ್ ಪ್ರಕರಣದ ವಿಚಾರಣೆ ನಡೆಸುವ ವೇಳೆ ಮೇ 1ರಂದು ಈ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ನ್ಯಾಯಾಲಯದ ಆರ್ಡರ್ಲಿ ಕಮಲ್‌ಸಿಂಗ್ ರಾವತ್ ಎಂಬಾತನ ವಿರುದ್ಧ ಕಳ್ಳತನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದು, ಆತನನ್ನು ತಕ್ಷಣ ಅಮಾನತುಗೊಳಿಸಲಾಗಿದೆ. ಈತನ ವಿರುದ್ಧದ ಆರೋಪ ಸಾಬೀತಾದಲ್ಲಿ ಮೂರು ವರ್ಷ ಜೈಲುಶಿಕ್ಷೆಗೆ ಒಳಗಾಗಬೇಕಾಗುತ್ತದೆ.

2000 ರೂ. ಮೌಲ್ಯದ 100 ನೋಟುಗಳನ್ನು ಹಳದಿ ಕವರ್‌ನಲ್ಲಿ ಹಾಕಿ ಚೀಲವೊಂದರಲ್ಲಿ ಹಾಕಿ ಸಿಬಿಐ ಪೇದೆ ನಿರಂಜನ್ ಸಿಂಗ್ ಎಂಬುವವರ ಸುಪರ್ದಿಯಲ್ಲಿ ಇಡಲಾಗಿತ್ತು. ಇದು ವಾಸ್ತವವಾಗಿ ಲಂಚ ಪ್ರಕರಣವೊಂದರಲ್ಲಿ ಆರೋಪಿಗೆ ಬಲೆ ಬೀಸಲು ಬಳಸಿದ ಹಣವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಕರಣದ ವಿಚಾರಣೆ ದಿನ ಇತರ ದಾಖಲೆಗಳ ಜತೆಗೆ ನೋಟಿನ ಕಂತೆಯನ್ನೂ ಸಿಂಗ್ ವಶಕ್ಕೆ ನೀಡಲಾಗಿತ್ತು.

ಮಧ್ಯಾಹ್ನ 1.30ರ ವೇಳೆಗೆ ಸಿಂಗ್ ಈ ಪೊಟ್ಟಣದ ಮೇಲೆ ಕಣ್ಣಿಟ್ಟಿರುವಂತೆ ರಾವತ್‌ಗೆ ಸೂಚಿಸಿ ಊಟದ ವಿರಾಮದ ವೇಳೆ ಶೌಚಾಲಯಕ್ಕೆ ಹೋಗಿದ್ದರು. ಎರಡು ಗಂಟೆ ಬಳಿಕ ಚೀಲವನ್ನು ಸಿಂಗ್ ಪರಿಶೀಲಿಸಿದಾಗ ನೋಟಿನ ಕಂತೆ ಮಾಯವಾಗಿತ್ತು !

ತಕ್ಷಣ ನ್ಯಾಯಾಧೀಶರಿಗೆ ಮಾಹಿತಿ ನೀಡಿ, ನ್ಯಾಯಾಲಯದ ಸಿಬ್ಬಂದಿ ಕೋರ್ಟ್‌ರೂಂನಲ್ಲಿ ಹಣಕ್ಕಾಗಿ ಹುಡುಕಾಡಿದರು. ಪೊಲೀಸರಿಗೆ ಮಾಹಿತಿ ನೀಡಿ, ಕೊಠಡಿಯಿಂದ ಯಾರೂ ಹೊರಕ್ಕೆ ಹೋದಂತೆ ದಿಗ್ಬಂಧನ ವಿಧಿಸಲಾಯಿತು.

ಈ ಸಂದರ್ಭದಲ್ಲಿ ನ್ಯಾಯಾಧೀಶರ ಆಪ್ತ ಕಾರ್ಯದರ್ಶಿ ಕೊಠಡಿಗೆ ತೆರಳಿದ ರಾವತ್ ಕೊಠಡಿಯಲ್ಲಿ ಏನೂ ಸಿಗಲಿಲ್ಲ ಎಂದು ಹೊರಬಂದ. ಮತ್ತೊಬ್ಬ ಸಿಬ್ಬಂದಿ ಶೋಧ ನಡೆಸಿದಾಗ, ಪಾತ್ರೆಯೊಂದರಲ್ಲಿ ಬಟ್ಟೆಯಲ್ಲಿ ಕಟ್ಟಿದ ನೊಟಿನ ಕಂತೆ ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ರಾವತ್‌ನ ಮೇಲೆ ಅನುಮಾನ ಬಂದು ವಿಚಾರಣೆಗೆ ಗುರಿಪಡಿಸಿದಾಗ ತಪ್ಪೊಪ್ಪಿಕೊಂಡ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News