ವಿದ್ಯಾಸಾಗರ್ ಪ್ರತಿಮೆ ಮರು ನಿರ್ಮಾಣಕ್ಕೆ ಬಿಜೆಪಿಯ ಹಣ ಬೇಕಿಲ್ಲ : ಮಮತಾ ಬ್ಯಾನರ್ಜಿ

Update: 2019-05-16 11:04 GMT

ಕೊಲ್ಕತ್ತಾ :  ಮಂಗಳವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ವೇಳೆ ನಡೆದ ಹಿಂಸಾಚಾರದ ಸಂದರ್ಭ ಹಾನಿಗೊಂಡ ಸಮಾಜ ಸುಧಾರಕ, ಚಿಂತಕ ಹಾಗೂ ಸಾಹಿತಿ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಪುನರ್ ನಿರ್ಮಾಣ ಮಾಡುವುದಾಗಿ ಪ್ರಧಾನಿ ಹೇಳಿರುವುದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಬಂಗಾಳಕ್ಕೆ ಬಿಜೆಪಿಯಿಂದ ಈ ಉದ್ದೇಶಕ್ಕೆ ಹಣ ಬೇಕಾಗಿಲ್ಲ, ರಾಜ್ಯದಲ್ಲಿ ಈ ಪ್ರತಿಮೆ ಮರು ನಿರ್ಮಾಣಕ್ಕೆ ಸಾಕಷ್ಟ ಸಂಪನ್ಮೂಲಗಳಿವೆ ಎಂದು ಹೇಳಿದ್ದಾರೆ.

ವಿದ್ಯಾಸಾಗರ್ ಅವರ ಪ್ರತಿಮೆಯಿದ್ದ ಸ್ಥಳದಲ್ಲಿಯೇ ಅದನ್ನು ಮರು ನಿರ್ಮಾಣ ಮಾಡುವುದಾಗಿ ಉತ್ತರ ಪ್ರದೇಶದ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ ಮೋದಿ ಇಂದು ಹೇಳಿದ್ದಕ್ಕೆ ಮಮತಾ ಪ್ರತಿಕ್ರಿಯಿಸಿ ''ನಾವೇಕೆ ಅವರ (ಬಿಜೆಪಿ) ಹಣ ತೆಗೆದುಕೊಳ್ಳಬೇಕು ?'' ಎಂದು ಪ್ರಶ್ನಿಸಿದ್ದಾರೆ. ''ಪ್ರತಿಮೆಗಳನ್ನು ಹಾನಿಗೈಯ್ಯುವುದು ಬಿಜೆಪಿಯ ಅಭ್ಯಾಸಗಳಲ್ಲೊಂದಾಗಿದೆ, ತ್ರಿಪುರಾದಲ್ಲಿಯೂ ಅದು ಹೀಗೆಯೇ ಮಾಡಿತ್ತು,'' ಎಂದರು.

''ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 200 ವರ್ಷ ಹಳೆಯ ಪರಂಪರೆಯನ್ನು ನಾಶಗೈದಿದೆ. ಈ ಪಕ್ಷವನ್ನು ಬೆಂಬಲಿಸುವವರನ್ನು ಸಮಾಜ ಒಪ್ಪದು,'' ಎಂದು ಮಮತಾ ಎಚ್ಚರಿಸಿದರು.

''ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪೋಸ್ಟ್ ಗಳ ಮುಖಾಂತರ ಬಿಜೆಪಿ ಜನರನ್ನು ಹಿಂಸೆಗೆ ಪ್ರಚೋದಿಸುತ್ತಿದೆ'' ಎಂದೂ ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News