ಡೀಮ್ಡ್ ಫಾರೆಸ್ಟ್ ಸರ್ವೇ ಕೈಗೆತ್ತಿಕೊಂಡಿಲ್ಲ, ಆತಂಕ ಬೇಡ: ಚಿಕ್ಕಮಗಳೂರು ಜಿಲ್ಲಾಧಿಕಾರಿ ಸ್ಪಷ್ಟನೆ

Update: 2019-05-16 12:18 GMT

ಚಿಕ್ಕಮಗಳೂರು, ಮೇ 16: ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸೇರಿರುವ ಭೂಮಿ ಸಾಕಷ್ಟು ಪ್ರಮಾಣದಲ್ಲಿದೆ. ಆದರೆ ಈ ಜಾಗ ಎಲ್ಲೆಲ್ಲಿದೆ ಎಂಬ ಬಗ್ಗೆ ಗೊಂದಲವಿದೆ. ಕಂದಾಯ ಭೂಮಿಯನ್ನು ಗುರುತಿಸುವ ಉದ್ದೇಶದಿಂದಲೇ ಕಂದಾಯ-ಅರಣ್ಯ ಇಲಾಖೆ ವತಿಯಿಂದ ಜಂಟಿ ಸರ್ವೇ ಮಾಡಲಾಗುತ್ತಿದೆ. ಸರಕಾರಿ ಜಾಗದಲ್ಲಿ ಸಾಗುವಳಿ ಮಾಡಿಕೊಂಡಿರುವ ರೈತರು, ಬೆಳೆಗಾರರನ್ನು ಒಕ್ಕಲೆಬ್ಬಿಸುವ ಯಾವುದೇ ಉದ್ದೇಶ ಜಿಲ್ಲಾಡಳಿಕ್ಕಿಲ್ಲ. ಈ ಬಗ್ಗೆ ರೈತರು ಅನಗತ್ಯ ಗೊಂದಲಕ್ಕೆ ಬಿದ್ದಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ-ಅರಣ್ಯ ಇಲಾಖೆ ಜಂಟಿ ಸರ್ವೇ ವಿಚಾರ ಸಂಬಂಧ ಪ್ರಸ್ತಾಪಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯ-ಕಂದಾಯ ಇಲಾಖೆ ವತಿಯಿಂದ ನಡೆಯುತ್ತಿರುವ ಸರ್ವೇ ವಿಚಾರ ಸಂಬಂಧ ಜಿಲ್ಲೆಯ ರೈತರು, ಕೃಷಿಕರಲ್ಲಿ ತಪ್ಪು ಗ್ರಹಿಕೆ ಉಂಟಾಗಿದೆ. ಜಿಲ್ಲಾಡಳಿತ ಪರಿಭಾವಿತ ಅರಣ್ಯ ಪ್ರದೇಶಗಳ ಸರ್ವೇ ಮಾಡಲು ಮುಂದಾಗಿದೆ ಎಂಬ ಕಲ್ಪನೆಯಿಂದಾಗಿ ಈ ಗೊಂದಲ ಉಂಟಾಗಿದೆ. ಆದರೆ ವಾಸ್ತವವಾಗಿ ಜಿಲ್ಲೆಯಲ್ಲಿರುವ ಕಂದಾಯ ಭೂಮಿಯನ್ನು ಗುರುತು ಮಾಡುವ ಉದ್ದೇಶದಿಂದ ಮಾತ್ರ ಜಂಟಿ ಸರ್ವೇ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದರು.

ಜಿಲ್ಲಾದ್ಯಂತ ಸಾರ್ವಜನಿಕರು, ನಿವೇಶನ ರಹಿತರು ಫಾರಂ ನಂ.94ಎ, 94ಬಿ, 94ಸಿ, 94ಸಿಸಿ ಮೂಲಕ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೇ ಅಂಗನವಾಡಿ ಕೇಂದ್ರ, ಶಾಲಾ ಕಟ್ಟಡ, ಆಸ್ಪತ್ರೆ, ರಸ್ತೆ, ವಿದ್ಯುತ್ ಮಾರ್ಗ ಸೇರಿದಂತೆ ಮತ್ತಿತರ ಮೂಲಸೌಕರ್ಯಕ್ಕಾಗಿ ಹಾಗೂ ಸರಕಾರಿ ಕಟ್ಟಡಗಳ ನಿರ್ಮಾಣಕ್ಕಾಗಿ ಸರಕಾರಿ ಜಮೀನುಗಳಿಗೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಸಾರಗೋಡು, ಭದ್ರಾ ಅಭಯಾರಣ್ಯ, ಮಸಗಲಿ ಮೀಸಲು ಅರಣ್ಯ, ಕುದುರೆಮುಖ ಅಭಯಾರಣ್ಯಗಳಿಂದ ಸಂತ್ರಸ್ಥರಾದವರಿಗೆ ಕಳೆದ 15ರಿಂದ 20 ವರ್ಷಗಳಲ್ಲಿ ಬೇರೆಡೆ ಸರಕಾರಿ ಜಮೀನುಗಳನ್ನು ನೀಡಲು ಸಾಧ್ಯವಾಗಿಲ್ಲ. ಈ ಎಲ್ಲ ಉದ್ದೇಶಗಳ ಹಿನ್ನೆಲೆಯಲ್ಲಿ ಅರಣ್ಯ ಹಾಗೂ ಕಂದಾಯ ಜಮೀನು ಸರ್ವೇ ಮಾಡುವುದು ಅನಿವಾರ್ಯವಾಗಿದೆ ಎಂದರು.

ಸರಕಾರಿ ಉದ್ದೇಶಗಳಿಗಾಗಿ ನಿವೇಶನ, ಜಮೀನು ನೀಡುವ ವಿಚಾರದಲ್ಲಿ ಅರಣ್ಯ-ಕಂದಾಯ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇತ್ತು. ಈ ಕಾರಣಕ್ಕೆ ಸಾಕಷ್ಟು ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಸರಕಾರಿ ಜಮೀನಿನ ಸರ್ವೇಗೆ ಸರಕಾರ, ಜಿಲ್ಲಾಮಂತ್ರಿ ಹಾಗೂ ಅರಣ್ಯ ಸಚಿವರಿಗೆ ಮನವಿ ಮಾಡಿ ಒತ್ತಡ ಹೇರಿದ್ದರು. ಈ ಹಿನ್ನೆನೆಯಲ್ಲಿ ಉಸ್ತುವಾರಿ ಸಚಿವರು ಹಾಗೂ ಇತ್ತೀಚೆಗೆ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರು ಜಿಲ್ಲಾಪಂಚಾಯತ್‍ನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಜಂಟಿ ಸರ್ವೇಗೆ ಸೂಚಿಸಿದ್ದರು. ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸರಕಾರಿ ಭೂಮಿ ಇದೆಯಾದರೂ ಎಲ್ಲಿದೆ ಎಂಬ ಬಗ್ಗೆ ಗೊಂದಲವಿದೆ. ಇದನ್ನು ಪತ್ತೆ ಹಚ್ಚುವ ಸಲುವಾಗಿ ಜಂಟಿ ಸರ್ವೇ ಮಾಡಲಾಗುತ್ತಿದೆ ಎಂದ ಅವರು, ಸರ್ವೇ ವಿಚಾರ ಸಂಬಂಧ ಮಾಜಿ ಮಂತ್ರಿ ಜೀವರಾಜ್, ಶಾಸಕರಾದ ಪ್ರಾಣೇಶ್, ಟಿ.ಡಿ.ರಾಜೇಗೌಡ, ಪರಿಸರವಾದಿ ಕಲ್ಕುಳಿ ವಿಠಲ್‍ಹೆಗ್ದೆ ಸೇರಿದಂತೆ ರೈತಮುಖಂಡರು ಡೀಮ್ಡ್ ಫಾರೆಸ್ಟ್ ಗೊಂದಲದಿಂದ ತಮ್ಮ ಬಳಿ ಮಾತನಾಡಿದ್ದು, ಇವರೆಲ್ಲರಿಗೂ ಸರ್ವೇ ವಿಚಾರದಲ್ಲಿದ್ದ ಗೊಂದಲದ ಬಗ್ಗೆ ಮನವರಿಕೆ ಮಾಡಿದ್ದು, ಸರಕಾರಿ ಜಮೀನು ಕೃಷಿಕರನ್ನು ಒಕ್ಕಲೆಬ್ಬಿಸುವ ಪ್ರಸ್ತಾಪವೇ ಜಿಲ್ಲಾಡಳಿತದ ಮುಂದಿಲ್ಲ. ಜಿಲ್ಲಾಡಳಿತ ಜನರ ಒಳಿತಿಗಾಗಿಯೇ ಈ ಸರ್ವೇ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಇದು ಜನವಿರೋಧಿ ಪ್ರಕ್ರಿಯೆ ಅಲ್ಲ ಎಂದು ಜಿಲ್ಲಾಧಿಕಾರಿ ಡಾ.ಗೌತಮ್ ತಿಳಿಸಿದರು.

ಚಿಕ್ಕಮಗಳೂರು-ಸಕಲೇಶಪುರ ರೈಲ್ವೆ ಸಂಪರ್ಕ ಯೋಜನೆ, ತುಮಕೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಯೋಜನೆ ಹಾಗೂ ಮಳಲೂರು ಏತ ನೀರಾವರಿ ಯೋಜನೆಗಳು ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದ ಯೋಜನೆಗಳಾಗಿವೆ. ಈ ಯೋಜನೆಗಳಿಗೆ ಕಾಯಕಲ್ಪ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮವಹಿಸುತ್ತಿದೆ. ಈ ಸಂಬಂಧ ಈಗಾಗಲೇ ಅಧಿಕಾರಿಗಳ ಹಾಗೂ ರೈತರೊಂದಿಗೆ ಸಭೆ ನಡೆಸಲಾಗಿದೆ. ಕರಗಡ ನೀರಾವರಿ ಯೋಜನೆ ಪ್ರಗತಿಯಲ್ಲಿದ್ದು, ಬಂಡೆಗಳ ಸ್ಥಳಾಂತರ ಕೆಲಸ ನಡೆಯುತ್ತಿದ್ದು, ಇನ್ನೊಂದು ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಅಮೃತ್ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿರುವ ಯುಜಿಡಿ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿ ಜೂನ್ ಅಂತ್ಯದೊಳಗೆ ಸಂಪೂರ್ಣ ಕಾಮಗಾರಿ ಮುಗಿಯಲಿದೆ ಎಂದ ಅವರು, ನಗರ ನೀರು ಸರಬರಾಜು ಯೋಜನೆಯಡಿಯಲ್ಲಿ 2.4 ಕೋ. ರೂ ವೇತನ ಬಾಕಿ ಇತ್ತು. ಈ ಹಣವನ್ನು ಪಾವತಿಸಲು ಕ್ರಮಕೈಗೊಳ್ಳಲಾಗಿದ್ದು, ನಗರ ನೀರು ಸರಬರಾಜು ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಲಾಗಿದೆ. ಈ ಸಿಬ್ಬಂದಿ ಪೈಕಿ 10 ಸಿಬ್ಬಂದಿ ತಂಡ ಪೈಪ್‍ಲೈನ್ ಅಳವಡಿಕೆ ಕೆಲಸ ನಿರ್ವಹಿಸುತ್ತಿದ್ದಾರೆ.
- ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News