ಕಾಫಿ ತೋಟಗಳಿಗೆ ಕಾಂಡಕೊರಕ ರೋಗದ ಭೀತಿ: ಹೂ ಮಳೆ ನಿರೀಕ್ಷೆಯಲ್ಲಿ ಕಾಫಿ ಬೆಳೆಗಾರರು

Update: 2019-05-16 17:34 GMT

ಚಿಕ್ಕಮಗಳೂರು, ಮೇ 16: ಜಿಲ್ಲೆಯ ಕೆಲವೆಡೆ ಮಳೆಗಾಲಕ್ಕೂ ಮುನ್ನ ಸುರಿಯುತ್ತಿದ್ದ ಅಕಾಲಿಕ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಕಾರಣ ಕಾಫಿ ತೋಟಗಳಿಗೆ ಮಳೆಯ ಕೊರತೆ ತೀವ್ರ ಎದುರಾಗಿದೆ. ವಾರದ ಹಿಂದೆ ಜಿಲ್ಲೆಯ ಅಲ್ಲಲ್ಲಿ ಅಕಾಲಿಕ ಮಳೆ ಸುರಿದಿದೆಯಾದರೂ ಮಳೆ ಕಾಫಿ ಬೆಳೆಗಾರರ ನಿರೀಕ್ಷೆಯನ್ನು ಈಡೇರಿಸಿಲ್ಲ. ಮಳೆ ಇಲ್ಲದ ಪರಿಣಾಮ ಕಾಫಿ ಗಿಡಗಳಿಗೆ ಕಾಂಡ ಕೊರಕ ಸೇರಿದಂತೆ ಇನ್ನಿತರ ರೋಗಗಳು ಹರಡುವ ಭೀತಿಯಲ್ಲಿ ಬೆಳೆಗಾರರು ಕಾಫಿ ತೋಟಗಳ ಸಂರಕ್ಷಣೆಗೆ ಹರಸಾಹಸ ಮಾಡುತ್ತಿದ್ದಾರೆ. 

ಜಿಲ್ಲೆಯಲ್ಲಿ ಮಾರ್ಚ್ ಅಂತ್ಯದಲ್ಲಿ ಆಗಾಗ್ಗೆ ಸುರಿದ ರೇವತಿ ಮಳೆ(ಹೂಮಳೆ) ಕಾಫಿ ತೋಟಗಳ ನೀರಿನ ದಾಹವನ್ನು ತಕ್ಕ ಮಟ್ಟಿಗೆ ತಣಿಸಿತ್ತು. ಸಾಧಾರಣವಾಗಿ ಸುರಿದಿದ್ದು, ಇದರಿಂದ ಕಾಫಿ ತೋಟಗಳಲ್ಲಿ ಉತ್ತಮ ಹೂ ಅರಳಿ ಬಂಪರ್ ಕ್ರಾಪ್ ಸಿಗುವ ಆಶಾಭಾವನೆ ಬೆಳೆಗಾರರದ್ದಾಗಿತ್ತು. ಆದರೆ ನಂತರದ ದಿನಗಳಲ್ಲಿ ಅಶ್ವಿನಿ, ಭರಣಿ ಸೇರಿದಂತೆ ಯಾವುದೇ ಮಳೆಯಾಗದ ಹಿನ್ನೆಲೆಯಲ್ಲಿ ಕಾಫಿ ತೋಟ ಗಳು ನೀರಿಲ್ಲದೇ ಒಣಗಲಾರಂಭಿಸಿದ್ದು, ಕೆಲವೆಡೆ ಕಾಫಿಗಿಡಗಳು ಕಾಂಡಕೊರಕ ರೋಗಕ್ಕೆ ತುತ್ತಾಗಿವೆ. ಮಳೆ ಇಲ್ಲದ ಕಾರಣದಿಂದಾಗಿ ಹೊಸದಾಗಿ ನಾಟಿ ಮಾಡಿದ್ದ ಕಾಫಿ, ಕಾಳುಮೆಣಸು, ಸಿಲ್ವರ್ ಗಿಡಗಳು ಬಿಸಿಲ ಝಳಕ್ಕೆ ಸುಟ್ಟು ಕರಕಲಾಗುತ್ತಿವೆ.

ಮಲೆನಾಡಿನ ಕಾಫಿ ತೋಟಗಳಿಗೆ ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ಸುರಿಯುವ ಹೂಮಳೆ ಪ್ರಮಾಣದಿಂದಾಗಿ ತೋಟದ ಮುಂದಿನ ಫಸಲು ನಿರ್ಧರವಾಗುತ್ತದೆ. ಮಳೆ ಕೊರತೆಯಾದರೆ ಕಾಫಿ ತೋಟದಲ್ಲಿ ಇಳುವರಿ ತೀವ್ರ ಕುಂಠಿತ ವಾಗುತ್ತದೆ. ಕಾಫಿ ಗಿಡಗಳಲ್ಲಿ ಚಿಗುರು ಬಾರದೇ ಹೂ ಕಟ್ಟುವುದು, ಕಾಯಿಯಾಗುವ ಪ್ರಕ್ರಿಯೆಗೆ ತೀವ್ರ ತೊಂದರೆಯಾಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಉತ್ತಮ ಹೂ ಮಳೆ ಮತ್ತು ಪೂರಕ ಮಳೆ ಕಾಫಿ ತೋಟಗಳಿಗೆ ಬಹಳ ಅಗತ್ಯವಾಗಿದೆ. ಈ ವರ್ಷ ಹಲವು ಪ್ರದೇಶಗಳಲ್ಲಿ ಹೂ ಮಳೆ ಮತ್ತು ಬ್ಯಾಕಿಂಗ್ ಮಳೆ ಇನ್ನೂ ಬಾರದಿರುವುದರಿಂದ ಸಣ್ಣ ಬೆಳೆಗಾರರು ಮಳೆಗಾಗಿ ಆಕಾಶ ನೋಡುವಂತಾಗಿದ್ದರೆ, ದೊಡ್ಡ ಬೆಳೆಗಾರರು ನೀರಿನ ಮೂಲಗಳನ್ನು ಹುಡುಕಿಕೊಂಡು ಲಕ್ಷಾಂತರ ರೂ. ಖರ್ಚು ಮಾಡಿ ಪಂಪ್‍ಸೆಟ್‍ಗಳ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ.

ಇನ್ನು ಕಳೆದ ಕೆಲ ವರ್ಷಗಳಿಂದ ಕಾಫಿ ಬೆಲೆ ತೀವ್ರ ಕುಸಿತ ಕಂಡಿದೆ. ಸಣ್ಣ ಕಾಫಿ ಬೆಳೆಗಾರರು ಬ್ಯಾಂಕ್‍ಗಳಿಂದ ಮಾಡಿದ ಸಾಲವನ್ನು ತೀರಿಸಲಾಗದೇ ಮುಂದೆ ಉತ್ತಮ ಬೆಳೆ ಹಾಗೂ ಬೆಲೆ ಬಂದರೆ ಸಾಲ ತೀರಿಸಬಹುದೆಂಬ ಆಶಾಭಾವನೆಯಲ್ಲಿ ಇದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಉಂಟಾಗುತ್ತಿರುವ ಹವಮಾನ ವೈಪರೀತ್ಯದಿಂದಾಗಿ ಕಾಫಿಗೆ ಬೆಲೆ ಇಲ್ಲದೇ ಆರ್ಥಿಕ ಸಂಕಷ್ಟ ಎದುರಾಗಿದ್ದು, ಬೆಳೆಯೂ ಇಲ್ಲದಿರುವುದರಿಂದ ಮುಂದೆ ಜೀವನ ಸಾಗಿಸುವುದೇ  ದುಸ್ತರವೆಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ 10ರಿಂದ 11 ಸಾವಿರದವರೆಗೆ ಪ್ರತೀ 50 ಕೆಜಿ ಮೂಟೆಗೆ ಇದ್ದ ಅರೇಬಿಕಾ ಕಾಫಿ ಬೆಲೆ ಕಳೆದ ಎರಡು ವರ್ಷದಿಂದ 6 ರಿಂದ 7 ಸಾವಿರ  ರೂ.ಗಳಿಗೆ ಮಾರಾಟವಾಗುತ್ತಿದೆ. ಈ ಬೆಲೆ ಕಾಫಿಯನ್ನು ಉತ್ಪಾದನೆ ಮಾಡಲು ಸಾಕಾಗದಿರುವ ಹಿನ್ನೆಲೆಯಲ್ಲಿ ಬೆಳೆಗಾರರು ಸಾಲದ ಸುಳಿಗೆ ಸಿಕ್ಕಿಕೊಳ್ಳುವಂತಾಗಿದೆ.

ಪಾತಾಳಕ್ಕೆ ಕುಸಿದ ಕಪ್ಪುಚಿನ್ನದ ಬೆಲೆ: ಇನ್ನು ಕಾಫಿ ತೋಟಗಳಲ್ಲಿ ಉಪಬೆಳೆಯಾಗಿರುವ ಕಪ್ಪು ಚಿನ್ನ ಎಂದೇ ಹೆಸರಾಗಿದ್ದ ಕಾಳುಮೆಣಸು ಜಿಲ್ಲೆಯಲ್ಲಿ ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದಾಗಿ ಉತ್ಪಾದನೆ ಕಡಿಮೆಯಾಗಿದ್ದು, ಇನ್ನೊಂದೆಡೆ ಕೇಂದ್ರದ ವಾಣಿಜ್ಯ ನೀತಿಗಳ ಪರಿಣಾಮ ಕಾಳು ಮೆಣಸು ಬೆಲೆ ಪಾತಾಳಕ್ಕಿಳಿದಿದೆ. ಹಿಂದೆ ಪ್ರತೀ ಕೆಜಿಗೆ 600 ರಿಂದ 700 ರೂ. ಗಳವರೆಗೆ ವ್ಯಾಪಾರವಾಗುತ್ತಿದ್ದ ಕಾಳು ಮೆಣಸು ಈಗ 300 ರಿಂದ 330 ರೂ. ಗೆ ಮಾರಾಟವಾಗುತ್ತಿದೆ. ಕೇಂದ್ರದ ಆಮದು ನೀತಿಯಿಂದಾಗಿ ವಿಯಟ್ನಾಂ ಹಾಗೂ ಬ್ರೆಜಿಲ್‍ಗಳಿಂದ ಕಳ್ಳದಾರಿ ಮೂಲಕ ದೇಶಕ್ಕೆ ಕಳಪೆ ಗುಣಮಟ್ಟದ ಕಾಳುಮೆಣಸು ಆಮದಾಗುತ್ತಿದೆ. ಪರಿಣಾಮ ದೇಶೀಯ ಕಾಳುಮೆಣಸಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗದಂತಾಗಿದೆ. ತೆರಿಗೆ ವಂಚಿಸಿ ದೇಶದ ಮಾರುಕಟ್ಟೆ ಪ್ರವೇಶ ಮಾಡು ತ್ತಿರುವ ಕಾಳು ಮೆಣಸಿನಿಂದಾಗಿ ಬೆಲೆಕುಸಿತ ಉಂಟಾಗಿದ್ದು, ಇದನ್ನು ತಡೆಗಟ್ಟಬೇಕೆಂದು ಬೆಳೆಗಾರರ ನಿಯೋಗ ಹಲವು ಬಾರಿ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂಬುದು ಬೆಳೆಗಾರರ ಅಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News