ಬಿಜೆಪಿ ಸ್ಥಾನಗಳ ಸಂಖ್ಯೆ ಮೂರಂಕಿಯನ್ನೂ ತಲುಪದು: ಮಮತಾ ಬ್ಯಾನರ್ಜಿ

Update: 2019-05-17 03:39 GMT

ಕೊಲ್ಕತ್ತಾ: ಬಿಜೆಪಿ ಜತೆ ಅಕ್ಷರಶಃ ಹೋರಾಟಕ್ಕೆ ಇಳಿದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ಸ್ಥಾನ ಗಳಿಕೆ ಮೂರಂಕಿಯನ್ನೂ ತಲುಪದು ಎಂದು ಭವಿಷ್ಯ ನುಡಿದಿದ್ದಾರೆ.

"ಆ ಗೂಂಡಾ ಪಕ್ಷ ಮತಗಳ ಖರೀದಿಗಾಗಿ ಹಣ ಚೆಲ್ಲುತ್ತಿದೆ" ಎಂದೂ ಅವರು ಆಪಾದಿಸಿದರು. ಬಿಜೆಪಿ ಏಕಾಂಗಿಯಾಗಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂಬ ಆ ಪಕ್ಷದ ಪ್ರತಿಪಾದನೆಯನ್ನು ಬಲವಾಗಿ ಅಲ್ಲಗಳೆದಿರುವ ಅವರು, "ಆಂಧ್ರದಲ್ಲಿ ಶೂನ್ಯ, ತಮಿಳುನಾಡಿನಲ್ಲಿ ಸೊನ್ನೆ, ಮಹಾರಾಷ್ಟ್ರದಲ್ಲಿ 20.. 200 ಸ್ಥಾನಗಳನ್ನು ಕಳೆದುಕೊಳ್ಳಲಿದೆ" ಎಂದು ರಾಜ್ಯವಾರು ವಿವರ ನೀಡಿದರು.

ಪಶ್ಚಿಮ ಬಂಗಾಳದ 42 ಸ್ಥಾನಗಳ ಪೈಕಿ 33 ಕ್ಷೇತ್ರಗಳ ಮತದಾನ ಮುಗಿದಿದ್ದು, ರಾಜಧಾನಿ ಕೊಲ್ಕತ್ತಾ ಸೇರಿದಂತೆ ಒಂಬತ್ತು ಕ್ಷೇತ್ರಗಳಲ್ಲಿ ಕೊನೆಯ ಹಂತದಲ್ಲಿ ಮತದಾನ ನಡೆಯಲಿದೆ. ಬಿಜೆಪಿ ಜತೆ ಚುನಾವಣಾ ಆಯೋಗ ಶಾಮೀಲಾಗಿದೆ ಎಂದು ಆಪಾದಿಸಿದ ಅವರು, ಈಶ್ವರಚಂದ್ರ ವಿದ್ಯಾಸಾಗರ್ ಅವರ ಪುತ್ಥಳಿ ಧ್ವಂಸದ ಹಿಂದೆ ತೃಣಮೂಲ ಗೂಂಡಾಗಳು ಇದ್ದಾರೆ ಎಂಬ ಹೇಳಿಕೆಯನ್ನು ಪ್ರಧಾನಿ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

ಪ್ರಧಾನಿಯನ್ನು ಸುಳ್ಳ ಎಂದು ಜರೆದ ಅವರು, "ಆರೋಪವನ್ನು ಸಾಬೀತುಪಡಿಸಿ; ಇಲ್ಲದಿದ್ದರೆ ನಾವು ನಿಮ್ಮನ್ನು ಜೈಲಿಗೆ ಎಳೆಯುತ್ತೇವೆ" ಎಂದು ಅಬ್ಬರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News