56 ಇಂಚಿನ ಎದೆ ಇದೆ ಎಂದು ಬಿಂಬಿಸಿಕೊಳ್ಳುವ ನಿಮಗೆ ಹೃದಯ ಎಲ್ಲಿದೆ ?: ಪ್ರಿಯಾಂಕಾ ಗಾಂಧಿ

Update: 2019-05-17 05:22 GMT

ಮಹಾರಾಜ್‌ಗಂಜ್ (ಉತ್ತರಪ್ರದೇಶ): 56 ಇಂಚಿನ ಎದೆ ಇದೆ ಎಂದು ಬಿಂಬಿಸಿಕೊಳ್ಳುವ ನಿಮ್ಮ ಹೃದಯ ಎಲ್ಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸುಪ್ರಿಯಾ ಶ್ರಿನಾಟೆ ಪರ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ರಾಷ್ಟ್ರೀಯತೆಯ ಪ್ರತಿಪಾದನೆಯನ್ನೂ ಪ್ರಶ್ನಿಸಿದರು.

"ರಾಷ್ಟ್ರೀಯತೆ ಬಗ್ಗೆ ಮಾತನಾಡುವಾಗಲೆಲ್ಲ ಮೋದಿ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಅವರಿಗೆ ರಾಷ್ಟ್ರೀಯತೆ ಎಂದರೆ ಪಾಕಿಸ್ತಾನದ ವಿರುದ್ಧ ಅವರು ಮಾಡಿದ ಕೆಲಸಗಳ ಬಗ್ಗೆ ಮಾತನಾಡುವುದು. ಉದ್ಯೋಗ, ರೈತರ ಸಮಸ್ಯೆಗಳು ಅವರಿಗೆ ರಾಷ್ಟ್ರೀಯತೆ ಅಲ್ಲ" ಎಂದು ಕುಟುಕಿದರು. ಕೇವಲ ಮಾರಾಟ ತಂತ್ರಗಳ ಬಗ್ಗೆ ಮಾತ್ರ ಗಮನ ಹರಿಸಿರುವ ಮೋದಿ ಸೊಕ್ಕಿನ ವ್ಯಕ್ತಿ ಎಂದು ಟೀಕಿಸಿದರು.

ಮೋದಿಯವರನ್ನು ರೈತ ವಿರೋಧಿ ಎಂದು ಬಣ್ಣಿಸಿದ ಅವರು, "ಕಳೆದ ಐದು ವರ್ಷಗಳಲ್ಲಿ ವಿಶ್ವದ ಎಲ್ಲ ಕಡೆಗಳಿಗೂ ಮೋದಿ ಭೇಟಿ ನೀಡಿದರು. ಆದರೆ ತಮ್ಮದೇ ದೇಶದ ರೈತರನ್ನು ಭೇಟಿ ಮಾಡುವ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ" ಎಂದು ಹೇಳಿದರು. ರೈತ ಸಮ್ಮಾನ್ ಯೋಜನೆಯಡಿ ರೈತ ಕುಟುಂಬಗಳಿಗೆ ವಾರ್ಷಿಕ ಆರು ಸಾವಿರ ರೂ. ನೀಡುವ ಕ್ರಮದ ಬಗ್ಗೆ ಪ್ರಶ್ನಿಸಿದ ಅವರು, "ಈ ಯೋಜನೆ ರೈತರಿಗೆ ಅವಮಾನ; ಐದು ಮಂದಿ ಇರುವ ರೈತರ ಕುಟುಂಬದಲ್ಲಿ ಪ್ರತಿಯೊಬ್ಬರಿಗೆ ದಿನಕ್ಕೆ ಎರಡು ರೂಪಾಯಿ ಸಿಕ್ಕಂತಾಗುತ್ತದೆ" ಎಂದು ಹೇಳಿದರು.

ಇದರ ಬದಲಾಗಿ ಕಾಂಗ್ರೆಸ್ ಪಕ್ಷ ಎಲ್ಲ ಬಡಕುಟುಂಬಗಳಿಗೆ ವರ್ಷಕ್ಕೆ 72 ಸಾವಿರ ರೂಪಾಯಿ ನೀಡುವ ನ್ಯಾಯ್ ಯೋಜನೆ ಘೋಷಿಸಿರುವುದನ್ನು ಪ್ರಿಯಾಂಕಾ ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News