ಗಾಂಧೀಜಿಯ ಹಂತಕನ ಬಗ್ಗೆ ಅನುಕಂಪವಿಲ್ಲ: ವಿವಾದಾತ್ಮಕ ಟ್ವೀಟ್ ಡಿಲೀಟ್ ಮಾಡಿದ ಅನಂತ್ ಕುಮಾರ್ ಹೆಗಡೆ, ನಳಿನ್

Update: 2019-05-17 07:13 GMT

ಬೆಂಗಳೂರು, ಮೇ 17:  ನಾಥೂರಾಮ್ ಗೋಡ್ಸೆ ಬೆಂಬಲಿಸಿ ಮಾಡಿದ್ದ ತಮ್ಮ ಟ್ವೀಟ್ ಗಳು ವಿವಾದವನ್ನುಂಟು ಮಾಡುತ್ತಿದ್ದಂತೆ ಸಂಸದ  ನಳಿನ್ ಕುಮಾರ್  ಕಟೀಲ್ ಮತ್ತು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ತಮ್ಮ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದಾರೆ.

"ನಾಥೂರಾಮ್ ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72 , ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000.  ಈಗ ನೀವೇ ಹೇಳಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು?" ಎಂದು ನಳೀನ್ ಕುಮಾರ್ ಟ್ವೀಟ್ ಮಾಡಿದ್ದರು.

ನಳಿನ್ ಕುಮಾರ್ ಕಟೀಲ್  ಟ್ವೀಟ್ ಬೆನ್ನಲ್ಲೇ ಗೋಡ್ಸೆ ಬೆಂಬಲಿಸಿ  ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಟ್ವೀಟ್ ಮಾಡಿದ್ದರು. ಇದು ಹೊಸ ವಿವಾದಕ್ಕೆ ಕಾರಣವಾಗಿತ್ತು. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ  ಸೇರಿದಂತೆ ಹಲವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಸಂಸದ  ನಳಿನ್ ಕುಮಾರ್  ಕಟೀಲ್ ಮತ್ತು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ  ಟ್ವೀಟ್ ನ್ನು ಡಿಲೀಟ್ ಮಾಡಿದ್ದಾರೆ. ಗೋಡ್ಸೆ ಪರ ಟ್ವೀಟ್ ಗಾಗಿ ನಾನು ವಿಷಾದಿಸುತ್ತೇನೆ ಎಂದು ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅನಂತ್ ಕುಮಾರ್ ಹೆಗಡೆ, “ನಿನ್ನೆಯಿಂದ ನನ್ನ ಖಾತೆ ಹ್ಯಾಕ್ ಆಗಿದೆ. ಗಾಂಧೀಜಿಯ ಹಂತಕನನ್ನು ಸಮರ್ಥಿಸುವ ಪ್ರಶ್ನೆಯೇ ಇಲ್ಲ. ಗಾಂಧೀಜಿಯ ಹಂತಕನ ಬಗ್ಗೆ ಅನುಕಂಪವಾಗಲೀ, ಸಮರ್ಥನೆಯಾಗಲೀ ಇರಲು ಸಾಧ್ಯವಿಲ್ಲ. ದೇಶಕ್ಕೆ ಗಾಂಧೀಜಿ ನೀಡಿದ ಕೊಡುಗೆ ಬಗ್ಗೆ ಸಂಪೂರ್ಣ ಗೌರವವಿದೆ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News