ಧಾರವಾಡ ಪೇಡಾದ ಸಿಹಿಯಷ್ಟು ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ: ಡಿ.ಕೆ.ಶಿವಕುಮಾರ್

Update: 2019-05-17 13:10 GMT

ಹುಬ್ಬಳ್ಳಿ, ಮೇ 17: ಕುಂದಗೋಳ ಕ್ಷೇತ್ರವನ್ನು ದತ್ತು ತೆಗೆದುಕೊಂಡು, ಧಾರವಾಡ ಪೇಡಾ ಎಷ್ಟು ಸಿಹಿ ಇದೆಯೋ ಅಷ್ಟರ ಮಟ್ಟಿಗೆ ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತೇನೆ. ನಾನು ಕೊಟ್ಟ ಮಾತಿಗೆ ತಪ್ಪುವವನಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿ, ಕ್ಷೇತ್ರದ ಅಭಿವೃದ್ಧಿಗೆ ತಾವು ಬದ್ಧ ಎಂಬ ಭರವಸೆ ನೀಡಿದರು. ಕುಂದಗೋಳ ಕ್ಷೇತ್ರದಲ್ಲಿ ನಡೆಯುತ್ತಿರುವುದು ಧರ್ಮ ಯುದ್ಧ. ಈ ಡಿ.ಕೆ.ಶಿವಕುಮಾರ್ ಕೊಟ್ಟ ಮಾತು ತಪ್ಪಲಿಲ್ಲ. ಬಳ್ಳಾರಿಯಲ್ಲಿ ಏನು ಮಾತು ಕೊಟ್ಟಿದ್ದೇನೆ, ನಾನು ಅದನ್ನು ಉಳಿಸಿಕೊಂಡಿದ್ದೆ. ಬಳ್ಳಾರಿಯಲ್ಲಿ ‘ರಿಪಬ್ಲಿಕ್’ ತೆಗೆಸಿ, ಸಾಮಾನ್ಯ ಜನರ ಆಡಳಿತ ತಂದಿದ್ದೇನೆ. ಈ ಸಂಬಂಧ ಜಗದೀಶ್ ಶೆಟ್ಟರ್, ಯಡಿಯೂರಪ್ಪ ಜೊತೆ ಚರ್ಚಿಸಲು ಸಿದ್ಧ ಎಂದು ಅವರು ಹೇಳಿದರು.

ಕುಂದಗೋಳದಿಂದ ‘ನ್ಯಾಯ್’ ಯೋಜನೆ ಜಾರಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈಗಾಗಲೇ ಘೋಷಣೆ ಮಾಡಿದ ‘ನ್ಯಾಯ್’ ಯೋಜನೆಯನ್ನು ಕುಂದಗೋಳ ಕ್ಷೇತ್ರದಿಂದ ಆರಂಭ ಮಾಡಲಾಗುವುದು. ಈಗಾಗಲೇ ಪ್ರತಿ ಕುಟುಂಬಕ್ಕೆ 6 ಸಾವಿರ ರೂಪಾಯಿ ನೀಡುತ್ತೇವೆ ಎಂದು ಹೇಳಿದ್ದರು. ಅದನ್ನು ಇಲ್ಲಿಂದಲೇ ಆರಂಭ ಮಾಡಿಸುತ್ತೇನೆ. ಇದು ನನ್ನ ಮೊದಲ ಪ್ರಯತ್ನ ಮತ್ತು ಮಹತ್ವಾಕಾಂಕ್ಷೆಯ ಯೋಜನೆ ಎಂದು ಶಿವಕುಮಾರ್ ತಿಳಿಸಿದರು.

ಸಿ.ಎಸ್.ಶಿವಳ್ಳಿ ಹಿಂದುಳಿದವರು. ಆತ ತೀರಿಕೊಂಡ ನಂತರ ಅವರ ಪತ್ನಿ ಕುಸುಮಾ ಇದ್ದರು. ಮಾನವೀಯತೆ ಆಧಾರದ ಮೇಲೆ ಕುಸುಮಾ ಶಿವಳ್ಳಿ ಅವರಿಗೆ ಟಿಕೇಟ್ ನೀಡಿ ಅವರ ಹಿಂದೆ ನಾವು ಎಲ್ಲರೂ ಇದ್ದೇವೆ ಎಂದು ಅವರು ಹೇಳಿದರು.

ಕ್ಷೇತ್ರದ ಇಂಚಿಂಚೂ ಸುಧಾರಣೆ ಮಾಡುತ್ತೇವೆ. ನಾವು ಕಾನೂನಿಗೆ ಗೌರವ ನೀಡಲು ಇಂದಿನಿಂದ ಕ್ಷೇತ್ರದ ಹೊರಗಡೆ ಇರುತ್ತೇವೆ. ಸಂಪರ್ಕದ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ವಾಸ್ತವ್ಯ ಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು.

‘ಮಹಾದಾಯಿ ಯೋಜನೆ’ಯಲ್ಲಿ ಬಿಜೆಪಿ ನಾಯಕರು ವಿಫಲ: ಮಹಾದಾಯಿ ಯೋಜನೆ ಜಾರಿಯಲ್ಲಿ ನ್ಯಾಯಾಧೀಕರಣ ನೀಡಿದ ತೀರ್ಪಿನ ಆಧಾರವಾಗಿ ಕೇಂದ್ರ ಸರಕಾರದಿಂದ ನೋಟಿಸ್ ಹೊರಡಿಸಲು ರಾಜ್ಯ ಬಿಜೆಪಿ ನಾಯಕರಿಂದ ಸಾಧ್ಯವಾಗುತ್ತಿಲ್ಲ ಎಂದು ಅವರು ಟೀಕಿಸಿದರು.

ಉತ್ತರ ಕರ್ನಾಟಕದ ಸಮಗ್ರ ಜನತೆಯ ಹೋರಾಟದ ಫಲವಾಗಿ ನ್ಯಾಯಾಧೀಕರಣದಲ್ಲಿ ನೀರು ಸಿಕ್ಕಿದೆ. ಈ ಹೋರಾಟದಲ್ಲಿ ಎಲ್ಲ ವರ್ಗದ ಜನತೆ ತಮ್ಮನ್ನು ತೊಡಗಿಸಿಕೊಂಡಿದ್ದರು. ಇಡೀ ಚಂದನವನದ ನಟ, ನಟಿಯರು ಹೋರಾಟಕ್ಕೆ ಕೈ ಜೋಡಿಸಿದ್ದರು ಎಂದು ಶಿವಕುಮಾರ್ ಸ್ಮರಿಸಿದರು. ಆದರೆ, ಜಗದೀಶ್ ಶೆಟ್ಟರ್, ಯಡಿಯೂರಪ್ಪ ಮಹಾದಾಯಿ ಯೋಜನೆ ಜಾರಿಗೆ ನೋಟಿಸ್ ಜಾರಿ ಮಾಡಿಸಲು ಆಗುತ್ತಿಲ್ಲ. ನಾನು ಯಾವತ್ತೂ ಬೇರೆ ಪಕ್ಷದ ನಾಯಕರನ್ನು ಕೊಂಡುಕೊಂಡಿಲ್ಲ. ಬಿಜೆಪಿಯವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಜಗದೀಶ್ ಶೆಟ್ಟರ್ ಯಾಕೆ ಈ ರೀತಿಯಲ್ಲಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಅನ್ನುವುದು ಗೊತ್ತಿಲ್ಲ ಎಂದು ಅವರು ಹೇಳಿದರು.

ಯಡಿಯೂರಪ್ಪನವರು ವೀರಶೈವ ಲಿಂಗಾಯತರಿಗೆ ಮೋಸ ಮಾಡಿದ್ದಾರೆ. ವೀರೇಂದ್ರ ಪಾಟೀಲರನ್ನು ಹೀನಾಯವಾಗಿ ಕಾಂಗ್ರೆಸ್ ನಡೆಸಿಕೊಂಡಿದೆ ಎಂಬ ಹೇಳಿಕೆ ಸರಿಯಲ್ಲ. ವೀರಶೈವ ಲಿಂಗಾಯತರು ಕೇವಲ ಒಂದು ಪಕ್ಷಕ್ಕೆ ಸೀಮೀತವಾಗಿಲ್ಲ. ನಮ್ಮ ಪಕ್ಷದಲ್ಲಿ ವೀರಶೈವ ಲಿಂಗಾಯತರು ಇಲ್ಲವೇ, ಈ ರೀತಿ ಒಡೆದು ಆಳುವ ನೀತಿ ಯಡಿಯೂರಪ್ಪಕೈ ಬೀಡಬೇಕು ಎಂದು ಶಿವಕುಮಾರ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವರಾದ ವಿನಯ ಕುಲಕರ್ಣಿ, ಸಂತೋಷ್ ಲಾಡ್, ಸಂಸದ ಡಿ.ಕೆ.ಸುರೇಶ್, ಆರ್.ಬಿ.ತಿಮ್ಮಾಪುರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News