ಸಿಎಂ ಆಗಲು ನನಗೆ ಹೈಕಮಾಂಡ್ ಸೂಚಿಸಿಲ್ಲ: ಮಲ್ಲಿಕಾರ್ಜುನ ಖರ್ಗೆ

Update: 2019-05-17 14:43 GMT

ಕಲಬುರಗಿ, ಮೇ 17: ಹೈಕಮಾಂಡ್ ಆಗಲಿ ಅಥವಾ ರಾಜ್ಯದ ನಾಯಕರಾಗಲಿ ಮುಖ್ಯಮಂತ್ರಿ ಆಗಬೇಕೆಂದು ನನಗೆ ಹೇಳಿಲ್ಲ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಹಿರಿಯ ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಎಂದೋ ಮುಖ್ಯಮಂತ್ರಿ ಆಗಬೇಕಿತ್ತು’ ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಯ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಿರಾಕರಿಸಿದರು.

ಯಾವುದೋ ಒಂದು ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ಪ್ರತಿಯೊಬ್ಬರೂ ಪ್ರತಿಕ್ರಿಯೆ ಕೊಡುವುದು ಸಲ್ಲ. ಎಲ್ಲರೂ ಹೇಳಿಕೆ ಕೊಡುವುದರಿಂದ ಪಕ್ಷದಲ್ಲಿ ಒಡಕು ಉಂಟಾಗುತ್ತದೆ. ವೈಮನಸ್ಸು ಬರುತ್ತದೆ. ಹೈಕಮಾಂಡ್ ರ್ತೀಮಾನದಂತೆಯೇ ಕುಮಾರಸ್ವಾಮಿಯವರನ್ನು ಸಿಎಂ ಮಾಡಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಕಾಂಗ್ರೆಸ್ ಪಕ್ಷದ ಜತೆ ಗುರುತಿಸಿಕೊಂಡಿರುವ ಪಕ್ಷಗಳ ಮುಖಂಡರನ್ನು ಕರೆದು ಸೋನಿಯಾ ಗಾಂಧಿಯವರು ಮಾತನಾಡಿದ್ದಾರೆ. ಲೋಕಸಭೆ ಫಲಿತಾಂಶದ ಬಳಿಕ ಸಂಖ್ಯಾಬಲ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಫಲಿತಾಂಶ ಬಂದ ನಂತರವಷ್ಟೇ ಪ್ರಧಾನಿ ಅಭ್ಯರ್ಥಿ ಬಗ್ಗೆ ನಿರ್ಧಾರ ಮಾಡುತ್ತೇವೆ. ನಮ್ಮ ಪಕ್ಷದವರೆ ಪ್ರಧಾನಿ ಆಗಬೇಕೆಂದಾದರೆ, ಬೇರೆ ಪಕ್ಷಗಳ ನಿಲುವು ಹೇಗಿರುತ್ತದೊ ನೋಡಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಟೀಲ್ ವಿರುದ್ಧ ಆಕ್ರೋಶ: ‘ಗೋಡ್ಸೆ ಕೊಂದಿದ್ದು ಗಾಂಧಿಯನ್ನ, ರಾಜೀವ್ ಗಾಂಧಿ ಕೊಂದಿದ್ದು 17 ಸಾವಿರ ಜನರನ್ನ’ ಎಂಬ ಸಂಸದ ನಳಿನ್ ಕುಮಾಲ್ ಕಟೀಲ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಖರ್ಗೆ, ಇಂತಹ ಮಾತುಗಳಿಂದ ಅವರ ಮನಸ್ಥಿತಿ ಅರ್ಥವಾಗುತ್ತದೆ ಎಂದು ಟೀಕಿಸಿದರು.

ರಾಜೀವ್ ಗಾಂಧಿ ದೇಶದ ಐಕ್ಯತೆಗಾಗಿ ತಮ್ಮ ಪ್ರಾಣ ಕೊಟ್ಟಿದ್ದಾರೆ. ಕಟಿಲ್‌ನಂತಹ ಜನರ ಸಂಖ್ಯೆ ಹಾಗೂ ಅಂಥವರ ವಿಚಾರಧಾರೆ ಹೆಚ್ಚಾಗುತ್ತಿರುವುದರಿಂದ ದೇಶಕ್ಕೆ ತೊಂದರೆಯಾಗುತ್ತಿದೆ. ಇನ್ನು ಮುಂದೆಯಾದರೂ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡುವುದನ್ನು ಕಲಿಯಬೇಕು ಎಂದು ಖರ್ಗೆ ಸಲಹೆ ಮಾಡಿದರು.

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಕೊಲೆ ಮಾಡಿದವರನ್ನು ಬಿಜೆಪಿಯವರು ದೇವರು ಎಂದು ಪೂಜಿಸುವುದು ದುರದೃಷ್ಟಕರ ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News