ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಆರೋಪ: ವೈದ್ಯನಿಗೆ ಧರ್ಮದೇಟು

Update: 2019-05-17 15:50 GMT

ದಾವಣಗೆರೆ, ಮೇ 17: ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ವೈದ್ಯನಿಗೆ ಕರ್ನಾಟಕ ರಾಜ್ಯ ಶ್ರೀ ಭುವನೇಶ್ವರಿ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಾರ್ವಜನಿಕರು ಧರ್ಮದೇಟು ನೀಡಿ, ಪ್ರತಿಭಟಿಸಿದ ಘಟನೆ ಇಲ್ಲಿನ ಎಸ್‍.ಎಂ. ಕೃಷ್ಣ ನಗರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಕ್ರವಾರ ನಡೆಯಿತು.

ವೈದ್ಯ ಆಸ್ಪತ್ರೆಯ ಶುಶ್ರೂಷಕಿಯರು, ಚಿಕಿತ್ಸೆಗೆ ಬಂದ ಗರ್ಭಿಣಿ, ಮಹಿಳೆ, ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸುವುದು, ಲೈಂಗಿಕ ಕಿರುಕುಳ, ಕೆಟ್ಟ ಸಂದೇಶ ಕಳಿಸುವುದು, ಅಶ್ಲೀಲ ಸಿನಿಮಾ ಸಿಡಿ ಕಳಿಸುತ್ತಿದ್ದನೆಂದು ಆರೋಪಿಸಿ ಸಂಘಟನೆ ಮುಖಂಡರ ನೇತೃತ್ವದಲ್ಲಿ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ ಸಂಘಟನೆ ಮುಖಂಡರು, 4 ತಿಂಗಳ ಹಿಂದಷ್ಟೇ ಈ ಆಸ್ಪತ್ರೆಗೆ ವೈದ್ಯನಾಗಿ ಬಂದಿರುವ ಈ ವೈದ್ಯ ಪಾನಮತ್ತರಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಶ್ರಮಿಕರು, ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಈ ಭಾಗದಲ್ಲಿ ಚಿಕಿತ್ಸೆಗಾಗಿ ಬಂದ ಹೆಣ್ಣು ಮಕ್ಕಳು, ಗರ್ಭಿಣಿಯರು, ಯುವತಿಯರೊಂದಿಗೆ ಈ ವೈದ್ಯ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ಡಿಎಚ್‍ಓ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಇನ್ನು 1-2 ತಿಂಗಳ ಗರ್ಭಿಣಿಯರು ತಪಾಸಣೆಗೆ ಬಂದರೆ ಬಟ್ಟೆಯನ್ನೆಲ್ಲಾ ಎತ್ತಿ, ಅನುಚಿತವಾಗಿ ಲೈಂಗಿಕ ಕಿರುಕುಳ ನೀಡುತ್ತಾನೆ. ಪಾನಪತ್ತನಾಗಿ ಕಾರ್ಯ ನಿರ್ವಹಿಸುವ ಈ ವೈದ್ಯನು ಏನೂ ಆಗಿಲ್ಲ, ನರ್ಸ್ ಬಳಿ ಇಂಜೆಕ್ಷನ್ ಮಾಡಿಸಿಕೋ ಎಂದು ಹೇಳುತ್ತಾನೆ. 20-30 ರೂ. ಕೊಟ್ಟರಷ್ಟೇ ನರ್ಸ್ ಇಂಜೆಕ್ಷನ್ ಮಾಡುತ್ತಾರೆ. ಹಣ ಕೊಡದಿದ್ದರೆ ಅವಾಚ್ಯವಾಗಿ ಬಾಯಿಗೆ ಬಂದಂತೆ ಬೈಯ್ಯುತ್ತಾರೆ. ಯಾವುದೇ ರೋಗಿಗೆ ಡ್ರಿಪ್ ಹಾಕಿದರೆ 200 ರೂ.ಗಳನ್ನು ನರ್ಸ್ ಮತ್ತು ಈ ವೈದ್ಯನಿಗೆ ನೀಡಬೇಕು ಎಂದು ಅವರು ಆರೋಪಿಸಿದರು.  

ಕಾಮುಕ ವೈದ್ಯ ಹಾಗೂ ಭ್ರಷ್ಟ ನರ್ಸ್ ವಿರುದ್ಧ ಆರೋಗ್ಯ ಇಲಾಖೆ ಕಠಿಣ ಕ್ರಮ ಕೈಗೊಂಡು, ಈ ಆಸ್ಪತ್ರೆಗೆ ಮಹಿಳಾ ವೈದ್ಯರನ್ನು ನೇಮಿಸಿ, ನೆಮ್ಮದಿಯ ಬದುಕನ್ನು ಕಟ್ಟಿ ಕೊಡಬೇಕು. ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಬಗ್ಗೆ ಉದಾಸೀನ ಮಾಡಿದರೆ ಯಾವುದೇ ಸಾವು ನೋವು, ಅನಾಹುತ, ಕಹಿ ಘಟನೆ ಸಂಭವಿಸಿದರೆ ಅದಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸಂಘಟನೆ ಅಧ್ಯಕ್ಷೆ ಎಚ್.ವಿ.ಪೂರ್ಣಿಮಾ, ಕೆ.ಎಸ್.ಶಿವಕುಮಾರ, ಎಂ.ಫಾತಿಮಾ ಸೇರಿದಂತೆ ಸ್ಥಳೀಯ ನಿವಾಸಿಗಳು, ಸಂತ್ರಸ್ಥ ಸಿಬ್ಬಂದಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News