ಚಿಕ್ಕಮಗಳೂರು: ಸಿದ್ದರಾಮಯ್ಯ ವಿರುದ್ಧ ಶೋಭಾ ಹೇಳಿಕೆ ಖಂಡಿಸಿ ಕಾಂಗ್ರೆಸ್ ಧರಣಿ

Update: 2019-05-17 15:55 GMT

ಚಿಕ್ಕಮಗಳೂರು, ಮೇ 17: ಮಾಜಿ ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಅವರು ಅವಹೇಳಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಧರಣಿ ನಡೆಸಿ, ಪ್ಯಾಂಟ್ ಹಾಗೂ ಬಳೆಗಳನ್ನು ಪ್ರದರ್ಶಿಸಿ ಶೋಭಾ ಕರಂದ್ಲಾಜೆ ಬಳೆ, ಪ್ಯಾಂಟ್ ತೊಟ್ಟು ಕೊಳ್ಳಬೇಕೆಂದು ಒತ್ತಾಯಿಸಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ವಿಜಯ್‍ಕುಮಾರ್, ಅರಣ್ಯ ಮತ್ತು ವಿಹಾರಧಾಮ ನಿಗಮದ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಮುಹಮ್ಮದ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಮತ್ತಿತರ ಮುಖಂಡರ ನೇತೃತ್ವದಲ್ಲಿ ಕಾರ್ಯಕರ್ತರು ಶುಕ್ರವಾರ ನಗರದ ಆಝಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. 

ಈ ವೇಳೆ ಮಾತನಾಡಿದ ಮಾಜಿ ಎಮ್ಮೆಲ್ಸಿ ಗಾಯತ್ರಿ ಶಾಂತೇಗೌಡ, ಹಿಂದು ಸಂಸ್ಕೃತಿಯ ಪ್ರಕಾರ ಮಹಿಳೆಯಾದವರು ಬಳೆ ತೊಡುವುದು, ಸೀರೆ ಉಡುವುದು ಸಂಸ್ಕೃತಿಯಾಗಿದೆ. ಆದರೆ ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಯಾಗಿ ಶೋಭಾ ಕರಂದ್ಲಾಜೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಳೆ ತೊಟ್ಟುಕೊಳ್ಳಿ ಎನ್ನುವ ಮೂಲಕ ಹಿಂದೂ ಸಂಸ್ಕೃತಿಗೆ ಅಪಚಾರಗೈದಿರುವುದಲ್ಲದೇ ಮಹಿಳೆಯರು ಕೈಲಾಗದವರು ಎಂಬರ್ಥದಲ್ಲಿ ಮಾತನಾಡಿ ಇಡೀ ಮಹಿಳಾ ಸಂಕುಲಕ್ಕೆ ಅವಮಾನ ಮಾಡಿದ್ದಾರೆ. ಶೋಭಾ ಅವರ ವರ್ತನೆ ನೋಡಿದರೇ ಅವರು ಹೆಂಗಸೋ ಅಥವಾ ನಪುಂಸಕಳೋ ಎಂದು ಅನುಮಾನ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಡಿಸಿದ ಅವರು, ಮಹಿಳೆಯಾಗಿ ಬಳೆ ತೊಡದಿರುವ ಮೂಲಕ ಹಿಂದೂ ಸಂಸ್ಕೃತಿಯಂತೆ ನಡೆಯದ ಶೋಭಾ ಕರಂದ್ಲಾಜೆ ಅವರಿಗೆ ಸಿದ್ದರಾಮಯ್ಯ ಅವರ ಬಗ್ಗೆ ಟೀಕೆ ಮಾಡುವ ನೈತಿಕತೆಯೇ ಇಲ್ಲ. ಸಿದ್ದರಾಮಯ್ಯ ಅವರನ್ನು ಹೀಗಳೆದರೆ ದೊಡ್ಡ ಖ್ಯಾತಿ ಬರುತ್ತದೆ ಎಂದು ಅವರು ಭಾವಿಸಿದಂತಿದೆ. ಸಿದ್ದರಾಮಯ್ಯನಂತಹ ನಾಯಕನನ್ನು ಇಡೀ ರಾಜ್ಯ ಒಮ್ಮತದಿಂದ ಒಪ್ಪಿಕೊಂಡಿದೆ. ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿರುವ ಶೋಭಾರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಶೋಭಾ ತನ್ನ ನಡಳವಳಿಕೆಯನ್ನು ಬದಲಾಯಿಸಿಕೊಳ್ಳದೇ ನಾಲಗೆ ಹರಿಯಬಿಟ್ಟರೆ ತಕ್ಕ ಶಾಸ್ತಿಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್‍ಕುಮಾರ್ ಮಾತನಾಡಿ, ಬಿಜೆಪಿ ಮುಖಂಡರಿಗೆ, ಸಂಸದರಿಗೆ ಮಾನಸಿಕ ಅಸ್ವಸ್ಥತೆಯ ರೋಗ ಅಂಟಿಕೊಂಡಿದೆ. ನಳಿನ್‍ ಕುಮಾರ್ ಕಟೀಲ್, ಪ್ರತಾಪ್‍ ಸಿಂಹ, ಅನಂತ್‍ ಕುಮಾರ್ ತಮ್ಮ ಅಧಿಕಾರವಧಿಯುದ್ದಕ್ಕೂ ಮಾನಸಿಕ ಅಸ್ವಸ್ಥರಂತೆ ಮಾತನಾಡುತ್ತಿದ್ದಾರೆ. ಇದೀಗ ಶೋಭಾ ಕರಂದ್ಲಾಜೆ ಈ ಸಾಲಿಗೆ ಸೇರಿದ್ದಾರೆ. ಇಡೀ ರಾಜ್ಯ ಗೌರವಿಸುವ ಸಿದ್ದರಾಮಯ್ಯ ಅವರಂತಹ ನಾಯಕನನ್ನು ಟೀಕಿಸುವಾಗ ನಾಲಿಗೆ ಮೇಲೆ ಹಿಡಿತವಿರಬೇಕು. ಆದರೆ ಶೋಭಾ ತಾನೋರ್ವ ಮಹಿಳೆ ಎಂಬುದನ್ನು ಮರೆತು ಬಳೆ ತೊಟ್ಟುಕೊಳ್ಳಿ ಎಂದು ಅವಹೇಳನಕಾರಿಯಾಗಿ ಮಾತನಾಡಿರುವುದು ಸಿದ್ದರಾಮಯ್ಯ ಅಭಿಮಾನಿಗಳನ್ನು ಕೆರಳಿಸಿದೆ. ಪರಿಣಾಮ ಅವರು ನಾಡಿನುದ್ದಕ್ಕು ಜನರಿಂದ ಆಕ್ರೋಶ ಎದುರಿಸುವಂತಾಗಿದೆ. ನಾಲಗೆ ಮೇಲೆ ಹಿಡಿತವಿಲ್ಲದ ಶೋಭಾ ಕರಂದ್ಲಾಜೆ ಸಂಸದೆಯಾಗಿರಲು ಅರ್ಹರಲ್ಲ. ಮೇ 23ರಂದು ಅವರನ್ನು ಜನತೆ ಮನೆಗೆ ಕಳಿಸಲಿದ್ದಾರೆ. ಆಗಲಾದರೂ ಅವರು ತಮ್ಮ ಕೈಗೆ ಬಳೆ ತೊಟ್ಟುಕೊಂಡು ಅಪ್ಪಟ ಭಾರತೀಯ ನಾರಿಯಂತೆ ಕಾಲ ಕಳೆಯಲಿ ಎಂದು ವ್ಯಂಗ್ಯವಾಡಿದರು.

ರಾಜ್ಯ ಮಹಿಳಾ ಕಾಂಗ್ರೆಸ್‍ನ ರೇಖಾ ಹುಲಿಯಪ್ಪ ಗೌಡ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಬಳೆತೊಟ್ಟ ನಾರಿಗಿರುವ ಗೌರವವನ್ನು ವಿವರಿಸಿ, ಸಿದ್ದರಾಮಯ್ಯ ಅವರನ್ನು ನಿಂದಿಸುವ ಬರದಲ್ಲಿ ಶೋಭಾ ಕರಂದ್ಲಾಜೆ ದೇಶದ ಮಹಿಳೆಯರು ಹಾಗೂ ಬಳೆಗಳಿಗಿರುವ ಗೌರವನ್ನು ಬೀದಿ ಪಾಲು ಮಾಡಿದ್ದಾರೆ. ಹಿಂದೂ ಸಂಸ್ಕರತಿ ರಕ್ಷಣೆ ಮಾತನಾಡುವ ಬಿಜೆಪಿ ಮುಖಂಡರಿಂದಾಗಿಯೇ ದೇಶದ ಪುರಾತನ ಸಂಸ್ಕೃತಿ ಅವನತಿ ಹಾದಿ ಹಿಡಿಯುವಂತಾಗಿದೆ ಎಂದು ವಿಷಾದಿಸಿದರು.

ಯೂತ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಸಂಸದೆ ಶೋಭಾ ಕರಂದ್ಲಾಜೆ ಗಂಡುಬೀರಿಯಾಗಿದ್ದಾರೆ. ಅವರು ಬಳೆ ತೊಟ್ಟುಕೊಂಡು ಪ್ಯಾಂಟ್ ಶರ್ಟ್ ಧರಿಸಬೇಕು. ಕಾಂಗ್ರೆಸ್ ವತಿಯಿದ ಅವರಿಗೆ ಪ್ಯಾಂಟ್, ಶರ್ಟ್, ಬಳೆಗಳನ್ನು ಕಳುಹಿಸಲಾಗುವುದು ಎಂದರು. ಮುಖಂಡರಾದ ಕೆ.ಮುಹಮ್ಮದ್, ರೂಬೆನ್ ಮೋಸೆಸ್, ಎ.ಎನ್.ಮಹೇಶ್ ಮತ್ತಿತರರು ಮಾತನಾಡಿದರು. ಧರಣಿಯಲ್ಲಿ ಯೂತ್ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News