ಮೋದಿ, ಶಾಗೆ ಕ್ಲೀನ್ ಚಿಟ್: ಆಯೋಗದ ಸಭೆಗಳಿಂದ ಹಿಂದೆ ಸರಿದ ಚುನಾವಣಾ ಆಯುಕ್ತ ಲಾವಸ

Update: 2019-05-18 17:31 GMT

ಹೊಸದಿಲ್ಲಿ, ಮೇ 18: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪ ಪ್ರಕರಣಗಳಲ್ಲಿ ಕ್ಲೀನ್ ಚಿಟ್ ನೀಡಿದ ಚುನಾವಣಾ ಆಯೋಗದ ನಿರ್ಧಾರಗಳಿಗೆ ಅಸಮ್ಮತಿ ತೋರಿದ್ದ ಚುನಾವಣಾ ಆಯುಕ್ತ ಅಶೋಕ್ ಲಾವಸ, ಮೇ 4ರಿಂದ ಎಲ್ಲಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ  ಪ್ರಕರಣಗಳ  ಕುರಿತಾದ ಸಭೆಗಳಿಂದ ಹಿಂದೆ ಸರಿದಿದ್ದಾರೆ.

ತಾವು ಅಸಮ್ಮತಿ ಸೂಚಿಸಿದ್ದನ್ನು ದಾಖಲೆಗಳಲ್ಲಿ ಸೇರಿಸಿದರೆ ಹಾಗೂ ಆಯೋಗದ ಆದೇಶಗಳಲ್ಲಿ ಅಲ್ಪಸಂಖ್ಯಾತ ತೀರ್ಮಾನಗಳನ್ನೂ ಒಳಗೊಳಿಸಿದರೆ ಮಾತ್ರ ತಾವು ಇನ್ನು ಮುಂದಿನ ಸಭೆಗಳಿಗೆ ಹಾಜರಾಗುವುದಾಗಿ ಅವರು ತಿಳಿಸಿದ್ದಾರೆನ್ನಲಾಗಿದೆ.

ಲಾವಸ ಅವರ ಈ ನಿರ್ಧಾರದಿಂದಾಗಿ ಚುನಾವಣಾ ಆಯೋಗ ಮೇ 4ರಿಂದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಸಭೆಯನ್ನು ನಡೆಸಿಲ್ಲ. ಮೋದಿ ಮತ್ತು ಶಾ ವಿರುದ್ಧ ದಾಖಲಾಗಿದ್ದ ಎಲ್ಲಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲೂ ಅವರಿಗೆ ಕ್ಲೀನ್ ಚಿಟ್ ನೀಡಲು ಆಯೋಗ ಕೈಗೊಂಡ ನಿರ್ಧಾರ ವ್ಯಾಪಕ ಟೀಕೆಗೊಳಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಹೊಸ ಬೆಳವಣಿಗೆಯ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ ಇನ್ನೂ ಪ್ರತಿಕ್ರಿಯಿಸಿಲ್ಲ.

ಮೋದಿಗೆ ನೋಟಿಸ್ ನೀಡಬೇಕೆಂದು ಲಾವಸ ಮಾಡಿದ್ದ ಶಿಫಾರಸನ್ನು ತಿರಸ್ಕರಿಸಲಾಗಿತ್ತು. ಕನಿಷ್ಟ 6 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಮೋದಿಗೆ ಕ್ಲೀನ್‌ಚಿಟ್ ನೀಡಲಾಗಿದ್ದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಒಂದು ಪ್ರಕರಣದಲ್ಲಿ ಕ್ಲೀನ್‌ಚಿಟ್ ನೀಡಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಮೋದಿ ಮತ್ತು ಶಾಗೆ ಆಯೋಗವು ಕ್ಲೀನ್‌ಚಿಟ್ ನೀಡಿರುವುದನ್ನು ಎಲ್ಲಾ ವಿರೋಧ ಪಕ್ಷಗಳು ಖಂಡಿಸಿವೆ.

ಸದಸ್ಯರು ತದ್ರೂಪಿಗಳಲ್ಲ: ಸುನಿಲ್ ಅರೋರ

ಚುನಾವಣಾ ಆಯೋಗದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂಬ ವರದಿಯನ್ನು ತಳ್ಳಿಹಾಕಿರುವ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, ಆಯೋಗದ ಸದಸ್ಯರು ತದ್ರೂಪಿಗಳಲ್ಲ.ಎಲ್ಲಾ ವಿಷಯಗಳ ಬಗ್ಗೆ ಒಮ್ಮತ ಮೂಡಬೇಕೆಂದೇನೂ ಇಲ್ಲ. ಈ ಹಿಂದೆಯೂ ಆಯೋಗದ ಸದಸ್ಯರು ಪ್ರತ್ಯೇಕ ನಿಲುವು ವ್ಯಕ್ತಪಡಿಸಿದ ಸಂದರ್ಭಗಳಿವೆ ಎಂದು ಹೇಳಿದ್ದಾರೆ.

 ಆದರೆ ಚುನಾವಣಾ ಆಯುಕ್ತರ ಸೇವಾವಧಿ ಕೊನೆಗೊಂಡ ಬಳಿಕವೂ ಇದು ಆಯೋಗದ ಆಂತರಿಕ ವಿಷಯವಾಗಿಯೇ ಉಳಿಯಬೇಕು. ಕೆಲವೊಮ್ಮೆ ಹಲವು ಸಮಯದ ಬಳಿಕ ಸಂಬಂಧಿತ ಚುನಾವಣಾ ಆಯುಕ್ತರು ಬರೆದ ಕೃತಿಯಲ್ಲಿ ಇದು ಬಹಿರಂಗಗೊಳ್ಳುತ್ತದೆ.

ಏನಿದ್ದರೂ , ಇದು ಚುನಾವಣಾ ಆಯೋಗದ ಆಂತರಿಕ ವಿಷಯ ಎಂದು ಖಚಿತವಾಗಿ ಮತ್ತು ನಿಸ್ಸಂದೇಹವಾಗಿ ಹೇಳುತ್ತಿದ್ದೇನೆ. ಅಗತ್ಯವಿದ್ದರೆ ಈ ಕುರಿತ ಸಾರ್ವಜನಿಕ ಚರ್ಚೆಗೆ ನಾನು ಸಿದ್ಧನಿದ್ದೇನೆ. ಆದರೆ ಎಲ್ಲದಕ್ಕೂ ಒಂದು ಸಮಯವಿದೆ. ಆದ್ದರಿಂದ ಆಯೋಗದಲ್ಲಿ ಬಿಕ್ಕಟ್ಟು ಉಂಟಾಗಿದೆ ಎಂಬ ಪ್ರಚೋದಿತ ಆರೋಪ ಮತ್ತು ಊಹೆಯನ್ನು ಬಿಟ್ಟುಬಿಡಬೇಕು ಎಂದು ಅರೋರಾ ಹೇಳಿದ್ದು, ಈ ಕುರಿತು ನಿರ್ಧರಿಸಲು ಮೇ 25ರಂದು ಆಯೋಗದ ಸಭೆ ಕರೆಯಲಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News