ಚಿಕ್ಕಮಗಳೂರು ನಗರಕ್ಕೆ ತಂಪೆರೆದ ದಿಢೀರ್ ಮಳೆ

Update: 2019-05-18 18:01 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಮೇ 18: ಬಿಸಿಲಿನ ಧಗೆಗೆ ಬಸವಳಿದು ಹೋಗಿದ್ದ ನಗರದ ಜನತೆಗೆ ಶನಿವಾರ ಸಂಜೆ ವೇಳೆ ದಿಢೀರ್ ಸುರಿದ ಧಾರಾಕಾರ ಮಳೆಯಿಂದಾಗಿ ನಾಗರಿಕರು ಕೊಂಚ ನಿಟ್ಟುಸಿರು ಬಿಡವಂತಾಯಿತು.

ಶನಿವಾರ ಮಧ್ಯಾಹ್ನದ ವೇಳೆ ನಗರದ ಸುತ್ತಮುತ್ತ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆಯಾಗುತ್ತಲೇ ಗುಡುಗು ಸಿಡಿಲಿನೊಂದಿಗೆ ದಿಢೀರ್ ಸುರಿದ ಧಾರಾಕಾರ ಮಳೆ ಸುಮಾರು 20 ನಿಮಿಷಗಳ ಕಾಲ ಎಡಬಿಡದೇ ನಗರ ಸೇರಿದಂತೆ ಸುಮುತ್ತಲಿನ ಗ್ರಾಮಗಳಲ್ಲಿ ಸುರಿದಿದೆ. ದಿಢೀರ್ ಸುರಿದ ಮಳೆಯಿಂದಾಗಿ ನಗರದ ಜನತೆಗೆ ತಂಪೆರಚಿದಂತಾಗಿದೆಯಾದರೂ ಕೆಲವೇ ನಿಮಿಷಗಳ ಕಾಲ ಸುರಿದ ಮಳೆಯಿಂದಾಗಿ ಜನರು ನಿರಾಶರಾಗಿದ್ದಾರೆ.

ಚಿಕ್ಕಮಗಳೂರು ನಗರವಲ್ಲದೇ ತಾಲೂಕಿನ ಕೆಲ ಗ್ರಾಮಗಳಲ್ಲೂ ಕೆಲ ಹೊತ್ತು ಧಾರಾಕಾರ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಇನ್ನು ಮೂಡಿಗೆರೆ ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣವಿತ್ತಾದರೂ ಸಂಜೆ ವೇಳೆ ತಾಲೂಕಿನ ಕೆಲವೆಡೆ ತುಂತುರು ಮಳೆ ಸುರಿದ ಬಗ್ಗೆ ಮಳೆಯಾಗಿದೆ. ಕಡೂರು, ತರಕೆರೆ ತಾಲೂಕು ವ್ಯಾಪ್ತಿಯಲ್ಲಿ ಕೆಲ ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದ್ದು, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ಕೆಲವೆಡೆ ಸಾಧಾರಣ ಮಳೆಯಾಗಿದ್ದರೇ, ಕೆಲವೆಡೆ ತುಂತುರು ಮಳೆಯಾದ ಬಗ್ಗೆ ವರದಿಯಾಗಿದೆ.

ಜಿಲ್ಲೆಯಲ್ಲಿ ಕಾಫಿ ಬೆಳೆಗಾರರಿಗೆ ಈ ಅವಧಿಯಲ್ಲಿ ಮಳೆಯ ನಿರೀಕ್ಷೆಯಲ್ಲಿದ್ದು, ಕಳೆದೊಂದು ತಿಂಗಳಿನಿಂದ ಮಳೆ ಬಾರದಿರುವುದರಿಂದ ಕಾಫಿ ಗಿಡಗಳು ಕಾಂಡಕೊರಕ ರೋಗ ಬಾಧೆಗೆ ತುತ್ತಾಗುವ ಭೀತಿಯಲ್ಲಿದ್ದಾರೆ. ಈ ಅವಧಿಯಲ್ಲಿ ಸುರಿಯುವ ಮಳೆಯನ್ನು ಬೆಳೆಗಾರರು ಹೂ ಮಳೆ ಎಂದೆ ಕರೆಯುತ್ತಿದ್ದು, ಹೂ ಮಳೆ ಬಾರದಿರುವುದರಿಂದ ಕಾಫಿ ಗಿಡಗಳಲ್ಲಿ ಹೂ ಬಿಡದೇ ಮುಂದಿನ ಅವಧಿಗೆ ಕಾಫಿ ಬೆಳೆ ನಷ್ಟವಾಗಲಿದೆ ಎಂಬ ಆತಂಕ ಬೆಳೆಗಾರರನ್ನು ಕಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News