ಪ್ಲಿಸ್ಕೋವಾಗೆ ಇಟಾಲಿಯನ್ ಓಪನ್ ಕಿರೀಟ

Update: 2019-05-19 18:34 GMT

ರೋಮ್, ಮೇ 19: ಝೆಕ್‌ನ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಕರೊಲಿನಾ ಪ್ಲಿಸ್ಕೋವಾ ಬ್ರಿಟನ್‌ನ ಜೊಹನ್ನಾ ಕಾಂಟಾರನ್ನು ನೇರ ಸೆಟ್‌ಗಳಿಂದ ಮಣಿಸುವುದರೊಂದಿಗೆ ಡಬ್ಲುಟಿಎ ಇಟಾಲಿಯನ್ ಓಪನ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಇಲ್ಲಿ ರವಿವಾರ ನಡೆದ ಫೈನಲ್ ಹಣಾಹಣಿಯಲ್ಲಿ 2017ರ ಫ್ರೆಂಚ್ ಓಪನ್‌ನ ಸೆಮಿ ಫೈನಲಿಸ್ಟ್ ಪ್ಲಿಸ್ಕೋವಾ ಬ್ರಿಟನ್‌ನ ಕಾಂಟಾರನ್ನು 6-3, 6-4 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ. ಈ ಮೂಲಕ ವೃತ್ತಿಜೀವನದಲ್ಲಿ 13ನೇ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ. ಮೇ 26 ರಿಂದ ಆರಂಭವಾಗಲಿರುವ ಫ್ರೆಂಚ್ ಓಪನ್‌ಗೆ ಮೊದಲು ಈ ಟೂರ್ನಿ ಪ್ರಮುಖ ಪೂರ್ವತಯಾರಿ ಟೂರ್ನಿಯಾಗಿದೆ.

‘‘ಈ ವಾರ ನನ್ನ ಪಾಲಿಗೆ ಶ್ರೇಷ್ಠವಾಗಿತ್ತು. ಕೆಲವು ಕಠಿಣ ಪಂದ್ಯಗಳನ್ನು ಎದುರಿಸಿದ್ದೆ. ಅವರ ವಿರುದ್ಧ ಹೋರಾಡಿದ ಖುಷಿ ನನಗಿದೆ. ಇಂದು ನಾನು ಸ್ವಲ್ಪ ಹೆದರಿದ್ದೆ. ರೋಮ್‌ನಲ್ಲಿ ಫೈನಲ್ ಪಂದ್ಯ ನಡೆದ ಕಾರಣ ನಿರೀಕ್ಷೆ ಸಾಕಷ್ಟಿತ್ತು’’ಎಂದು ಮಾಜಿ ನಂ.1 ಆಟಗಾರ್ತಿ ಪ್ಲಿಸ್ಕೋವಾ ಹೇಳಿದ್ದಾರೆ. ಟೂರ್ನಿಯ ಮಧ್ಯೆಯೇ ಅಗ್ರ ಶ್ರೇಯಾಂಕಿತ ಆಟಗಾರ್ತಿಯರಾದ ನವೊಮಿ ಒಸಾಕಾ ಹಾಗೂ ಪೆಟ್ರಾ ಕ್ವಿಟೋವಾ ಗಾಯಗೊಂಡು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಫ್ರೆಂಚ್ ಓಪನ್ ಚಾಂಪಿಯನ್ ಸಿಮೊನಾ ಹಾಲೆಪ್ ಮೊದಲ ಸುತ್ತಿನಲ್ಲೇ ಎಡವಿದರು.

ನಾಲ್ಕು ಬಾರಿಯ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಎರಡನೇ ಸುತ್ತಿನ ಪಂದ್ಯಕ್ಕಿಂತ ಮೊದಲು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಎರಡು ತಿಂಗಳ ವಿಶ್ರಾಂತಿ ಬಳಿಕ ಸಕ್ರಿಯ ಟೆನಿಸ್‌ಗೆ ವಾಪಸಾಗಿದ್ದ ಸೆರೆನಾಗೆ ಮತ್ತೊಮ್ಮೆ ಮಂಡಿನೋವು ಬಾಧಿಸಿತ್ತು.

ಪ್ಲಿಸ್ಕೋವಾ 1978ರ ಬಳಿಕ ರೋಮ್‌ನಲ್ಲಿ ಇಟಾಲಿಯನ್ ಓಪನ್ ಪ್ರಶಸ್ತಿ ಜಯಿಸಿದ ಝೆಕ್‌ನ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. 1978ರಲ್ಲಿ ರೆಗಿನಾ ಮರ್ಸಿಕೋವಾ ಈ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News