ದೇಶದಲ್ಲಿ ಬಿಜೆಪಿ ಹಿಂಸಾತ್ಮಕ ಚಿಂತನೆಗಳನ್ನು ಬಿತ್ತುವಲ್ಲಿ ನಿರತವಾಗಿದೆ: ಎಚ್.ಎಸ್.ದೊರೆಸ್ವಾಮಿ

Update: 2019-05-20 15:15 GMT

ಬೆಂಗಳೂರು, ಮೇ 20: ಬಿಜೆಪಿಗೆ ಶಾಂತಿ, ಅಹಿಂಸೆ ಹಾಗೂ ಸಮಾನತೆ ಬೇಕಿಲ್ಲ. ಸಮಾಜದಲ್ಲಿ ಜಾತಿ ಭೇದಭಾವ ಮಾಡುವಂತಹ, ದೇಶದ ಸಂಪತ್ತು ಕೆಲವೇ ವರ್ಗಗಳಿಗೆ ಮಾತ್ರ ಮೀಸಲಿಡುವಂತಹ ಅಸಮಾನ ವ್ಯವಸ್ಥೆ ಬೇಕಿದೆ. ಹೀಗಾಗಿಯೆ ಬಿಜೆಪಿ ನಾಯಕರಿಗೆ ಗೋಡ್ಸೆ ಚಿಂತನೆಗಳು ಮಾದರಿಯಾಗಿವೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಸೋಮವಾರ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ಗಾಂಧಿ ಭವನ ಆವರಣದಲ್ಲಿ ಆಯೋಜಿಸಿದ್ದ, ಸಬ್ ಕೋ ಸನ್ಮತಿ ದೇ ಭಗವಾನ್ ಮೌನ ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಹಿಂಸಾತ್ಮಕ ಕಾರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಹೀಗಾಗಿ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸಲು ಮುಂದಾಗಿದೆ ಎಂದು ಆಪಾದಿಸಿದರು.

ಬಿಜೆಪಿ ಹಾಗೂ ಆರೆಸ್ಸೆಸ್ ಯುವ ಜನತೆಯನ್ನು ಬಳಸಿಕೊಂಡು ಸಮಾಜದಲ್ಲಿ ವಿಷ ಹರಡುವುದರಲ್ಲಿ ತೊಡಗಿವೆ. ಹೀಗಾಗಿ ಯುವಜನತೆ ಆರೆಸ್ಸೆಸ್ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಬಾರದು. ಅವರು ಹೇಳುವ ಹಸಿ ಸುಳ್ಳುಗಳಿಗೆ ಕಿವಿಗೊಟ್ಟು ಸಮಾಜಘಾತಕ ಕೃತ್ಯಗಳಲ್ಲಿ ತೊಡಗಬಾರದು. ಈ ನಿಟ್ಟಿನಲ್ಲಿ ಜನಪರ ಸಂಘಟನೆಗಳ ಕಾರ್ಯ ದೊಡ್ಡದಿದೆ ಎಂದು ಅವರು ಹೇಳಿದರು.

ಸಾವರ್ಕರ್ ಹೇಡಿ: ಹಿಂದುತ್ವವಾದಿ ಸಾವರ್ಕರ್ ಜೈಲಿನಿಂದ ಬಿಡುಗಡೆಯಾಗಲು ಬ್ರಿಟಿಷ್‌ರ ಮುಂದೆ ಅಂಗಲಾಚಿದ್ದ. ಅಷ್ಟೇ ಅಲ್ಲದೆ, ತನ್ನನ್ನು ಬಿಡುಗಡೆಗೊಳಿಸಿದರೆ ಬ್ರಿಟಿಷರಿಗೆ ಯಾವುದೆ ಸಮಸ್ಯೆಯಾಗದಂತೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುತ್ತೇನೆಂದು ಬ್ರಿಟಿಷ್ ಆಡಳಿತಗಾರರಿಗೆ ಪತ್ರ ಬರೆದಿದ್ದ. ಇಂತಹ ಹೇಡಿ ಆರೆಸ್ಸೆಸ್‌ಗೆ ಆದರ್ಶವಾಗಿದ್ದಾನೆ ಎಂದು ಅವರು ಲೇವಡಿ ಮಾಡಿದರು.

ಜಲ ತಜ್ಞ ರಾಜೇಂದ್ರ ಸಿಂಗ್ ಮಾತನಾಡಿ, ವಿಶ್ವಕ್ಕೆ ಅಹಿಂಸಾ ತತ್ವವನ್ನು ಬೋಧಿಸಿದ ಮಾಹಾತ್ಮ ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ಬಿಜೆಪಿ ವೈಭವೀಕರಿಸುತ್ತಿದೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ನಾವು ನಾಥೂರಾಮ್ ಗೋಡ್ಸೆಗಳ ಪ್ರತಿರೂಪಗಳೇ ಎಂದು ಸಾಬೀತು ಪಡಿಸುತ್ತಿದ್ದಾರೆ. ಆದರೆ, ಇದನ್ನು ಅರ್ಥಮಾಡಿಕೊಳ್ಳುವಲ್ಲಿ ಜನತೆ ಸೋತಿದ್ದಾರೆ ಎಂದು ಅವರು ವಿಷಾದಿಸಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ. ಕೃಷ್ಣ ಮಾತನಾಡಿ, ಮಹಾತ್ಮ ಗಾಂಧೀಜಿಯ ಚಿಂತನೆಗಳನ್ನು ಹೊರತುಪಡಿಸಿ ಭಾರತವನ್ನು ಊಹಿಸಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಗಾಂಧಿಯನ್ನು ಭಾರತವನ್ನು ಆವರಿಸಿಕೊಂಡಿದ್ದಾರೆ. ಆದರೆ, ಕೆಲವು ಧಾರ್ಮಿಕ ಮೂಲಭೂತವಾದಿಗಳು ಗಾಂಧೀಜಿಯ ಕುರಿತು ಅವಹೇಳನಕಾರಿಯಾಗಿ ಮಾತನಾಡುವುದರ ಮೂಲಕ ಗಾಂಧಿಯನ್ನು ಸಮಾಜದಿಂದ ಮರೆಮಾಚಬಹುದೆಂಬ ವಿಫಲ ಪ್ರಯತ್ನ ನಡೆಸುತ್ತಿದ್ದಾರೆ. ಇದು ಎಂದಿಗೂ ಸಾಧ್ಯವಾಗದು ಎಂದು ತಿಳಿಸಿದರು.

  ಯುವಜನತೆ ಗಾಂಧೀಜಿ ಬದುಕನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ದೇಶಕ್ಕಾಗಿ ಅವರು ಮಾಡಿದ ಕಾರ್ಯಗಳ ಕುರಿತು ಗಂಭೀರ ಅಧ್ಯಯನ ನಡೆಸಬೇಕು. ವಿದ್ಯಾರ್ಥಿಗಳಲ್ಲಿ ಅಧ್ಯಯನ ಪ್ರವೃತ್ತಿ ಬೆಳೆದರೆ ಮೂಲಭೂತವಾದಿಗಳು ಪಲಾನಯಗೈಯುತ್ತಾರೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್, ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ಗಾಂಧಿಭವನ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿ ದೇಶ ಮಾತ್ರವಲ್ಲ, ಇಡೀ ವಿಶ್ವದಲ್ಲೆ ಕಂಡುಬರುವುದಿಲ್ಲ. ಇಂತಹ ಪ್ರಧಾನಿಯಿಂದ ನಾವು ಜನಪರವಾದಂತಹ ಯಾವುದೇ ಕಾರ್ಯಯೋಜನೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಜನತೆಗೆ ಬಿಜೆಪಿ ಕಪಟ ನೀತಿಗಳ ಕುರಿತು ಜಾಗೃತಿ ಮೂಡಿಸುವುದೊಂದೆ ಪರಿಹಾರ.

-ರಾಜೇಂದ್ರ ಸಿಂಗ್, ಜಲ ತಜ್ಞ

ಮಹಾತ್ಮ ಗಾಂಧೀಜಿಗೆ ರಾಮರಾಜ್ಯ ಕಲ್ಪನೆಯೆಂದರೆ ಗ್ರಾಮೀಣಾಭಿವೃದ್ಧಿ, ನಾಥೂರಾಮ್ ಗೋಡ್ಸೆಗೆ ರಾಮರಾಜ್ಯವೆಂದರೆ ಪುರೋಹಿತಶಾಹಿ, ಮನು ಸಿದ್ಧಾಂತ ಮರುಸ್ಥಾಪನೆಯಾಗಿದೆ. ಹೀಗಾಗಿ, ಯುವ ಜನತೆ ನಾವು ಯಾವ ಕಲ್ಪನೆಯ ರಾಮರಾಜ್ಯದ ಕಡೆಗೆ ಹೋಗಬೇಕೆಂಬುದು ನಿರ್ಧರಿಸಿ ಅದರಂತೆ ನಡೆದುಕೊಳ್ಳಬೇಕು.

-ಪ್ರಸನ್ನ, ರಂಗಕರ್ಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News