ವಿವಾದಾತ್ಮಕ ಹೇಳಿಕೆಗಳ ಬಳಿಕ ಈಗ ಪ್ರಜ್ಞಾ ‘ಮೌನ ಪ್ರಾಯಶ್ಚಿತ’!

Update: 2019-05-20 15:49 GMT

ಭೋಪಾಲ,ಮೇ 20: ತನ್ನ ಇತ್ತೀಚಿನ ಕೆಲವು ಹೇಳಿಕೆಗಳ ಮೂಲಕ ವಿವಾದಗಳನ್ನು ಸೃಷ್ಟಿಸಿದ್ದ ಬಿಜೆಪಿಯ ಭೋಪಾಲ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಅದಕ್ಕಾಗಿ ಸೋಮವಾರ ಕ್ಷಮೆಯನ್ನು ಯಾಚಿಸಿದ್ದಾರೆ ಮತ್ತು ಪ್ರಾಯಶ್ಚಿತ್ತದ ಸಂಕೇತವಾಗಿ 63 ಗಂಟೆಗಳ ‘ಮೌನ’ವನ್ನು ಆಚರಿಸುತ್ತಿರುವುದಾಗಿ ತಿಳಿಸಿದ್ದಾರೆ.

ಚುನಾವಣೆಗಳ ಬಳಿಕ ಈಗ ಆತ್ಮ ಶೋಧನೆಯ ಸಮಯವಾಗಿದೆ ಎಂದು ತಾನು ಭಾವಿಸಿರುವುದಾಗಿ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಠಾಕೂರ್ ಹೇಳಿದ್ದಾರೆ.

ಕಳೆದ ವಾರ ಮಹಾತ್ಮಾ ಗಾಂಧಿಯವರ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುವ ಮೂಲಕ ವಿವಾದವನ್ನು ಸೃಷ್ಟಿಸಿದ್ದ ಠಾಕೂರ್,ಅದಕ್ಕೂ ಮುನ್ನ ಆಗಿನ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ ಕರ್ಕರೆ ಅವರು ತನ್ನ ಶಾಪದಿಂದಾಗಿಯೇ 26/11ರ ಮುಂಬೈ ಭಯೊತ್ಪಾದಕ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದರು ಎಂದು ಹೇಳಿದ್ದರು.

ಠಾಕೂರ್ ಸೋಮವಾರ ಬೆಳಿಗ್ಗೆಯಿಂದ ‘21 ಪ್ರಹರಗಳ ಮೌನ’ವನ್ನು ಆಚರಿಸುತ್ತಿದ್ದಾರೆ ಎಂದು ಅವರ ನಿಕಟವರ್ತಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

‘‘ಚುನಾವಣೆಗಳ ಬಳಿಕ ಇದು ಆತ್ಮಶೋಧನೆಗೆ ಕಾಲವಾಗಿದೆ. ಈ ಸಂದರ್ಭದಲ್ಲಿ ನನ್ನ ಮಾತುಗಳು ದೇಶಭಕ್ತರನ್ನು ನೋಯಿಸಿದ್ದರೆ ಅದಕ್ಕಾಗಿ ಕ್ಷಮೆ ಯಾಚಿಸುತ್ತಿದ್ದೇನೆ. ಸಾರ್ವಜನಿಕ ಜೀವನದ ಶಿಷ್ಟಾಚಾರ ಪಾಲಿಸಲು ಮತ್ತು ಪಶ್ಚಾತ್ತಾಪ ಪಡಲು ನಾನು 21 ಪ್ರಹರಗಳ ಮೌನವನ್ನು ಆಚರಿಸುತ್ತಿದ್ದೇನೆ ಮತ್ತು ಕಠಿಣ ಪ್ರಾಯಶ್ಚಿತ್ತಕ್ಕೆ ಒಳಪಡುತ್ತೇನೆ ’’ಎಂದು ಠಾಕೂರ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News