ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಮುಖಂಡರ ಮಧ್ಯೆ ಪೈಪೋಟಿ

Update: 2019-05-20 15:07 GMT

ಬೆಂಗಳೂರು, ಮೇ 20: ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಮುನ್ನಡೆ ಸಾಧ್ಯತೆ ಎಂಬ ಅಂಶ ಬಯಲಾಗುತ್ತಿದ್ದಂತೆ ರಾಜ್ಯ ಬಿಜೆಪಿ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ಆರಂಭವಾಗಿದೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಮ್ಮ ಆಪ್ತರನ್ನು ತಂದು ಕೂರಿಸಲು ಹೊಸದಿಲ್ಲಿ ಮಟ್ಟದಲ್ಲಿ ಲಾಬಿ ಆರಂಭಿಸಿದ್ದಾರೆ ಎನ್ನಲಾಗಿದ್ದು, ಈ ಮಧ್ಯೆ ಬಿಎಸ್‌ವೈ ತಮ್ಮ ಆಪ್ತರನ್ನು ಆ ಸ್ಥಾನದಲ್ಲಿ ತರಲು ರಣತಂತ್ರ ರೂಪಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಆರೆಸೆಸ್ಸ್ ಹಿನ್ನೆಲೆಯ ‘ನಿಷ್ಠರನ್ನೇ’ ಆ ಸ್ಥಾನದಲ್ಲಿ ಕೂರಿಸಲು ಬಿ.ಎಲ್.ಸಂತೋಷ್ ಪ್ರಯತ್ನಿಸುತ್ತಿದ್ದು, ಶಾಸಕ ಸಿ.ಟಿ.ರವಿ, ಸಂಸದ ನಳಿನ್ ಕುಮಾರ್ ಕಟೀಲ್, ಮುಖಂಡರಾದ ಭಾನುಪ್ರಕಾಶ್, ನಿರ್ಮಲ್‌ಕುಮಾರ್ ಸುರಾನ ಸೇರಿದಂತೆ 30 ಮಂದಿ ಏಕಾಏಕಿ ಅಂಡಮಾನ್ ಪ್ರವಾಸ ಕೈಗೊಂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟಹಾಕಿದೆ.

ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಸರಕಾರ ಅಧಿಕಾರಕ್ಕೆ ಬರಲಿದ್ದು, ರಾಜ್ಯದಲ್ಲಿಯೂ ಮೈತ್ರಿ ಸರಕಾರ ಬದಲಾವಣೆಯಾಗಿ ಬಿಎಸ್‌ವೈ ಸಿಎಂ ಆಗಲಿದ್ದಾರೆ ಎಂಬ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಆಪ್ತರನ್ನೇ ತರಲು ಸಿದ್ಧತೆ ನಡೆಸಿದ್ದಾರೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಅಥವಾ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸುವಂತೆ ವರಿಷ್ಠರಿಗೆ ಮನವಿ ಮಾಡಲು ಚಿಂತನೆ ನಡೆಸಿದ್ದಾರೆಂದು ಗೊತ್ತಾಗಿದೆ. ಹೀಗಾಗಿ ಯಾರ ಕೈ ಮೇಲಾಗಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

ವಿಶೇಷವೇನೂ ಇಲ್ಲ

‘ವಿವಿಧ ರಾಜ್ಯಗಳ ಚುನಾವಣಾ ಕಾರ್ಯಕ್ಕೆ ಪಕ್ಷದಿಂದ ನಿಯೋಜನೆಗೊಂಡಿದ್ದ ಮುಖಂಡರು ಪೂರ್ವ ನಿಗದಿಯಂತೆ ಅಂಡಮಾನ್ ಪ್ರವಾಸ ಕೈಗೊಂಡಿದ್ದು, ವಿಶ್ಲೇಷಣಾ ಬೈಠಕ್ ನಡೆಸಲಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ನೂತನ ರಾಷ್ಟ್ರೀಯಾಧ್ಯಕ್ಷರ ನೇಮಕ ನಂತರ ರಾಜ್ಯದಲ್ಲೂ ನೂತನ ಅಧ್ಯಕ್ಷರ ನೇಮಕ ಆಗುತ್ತದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾವುದೇ ಪೈಪೋಟಿ ಇಲ್ಲ’

-ರವಿಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News