ಉತ್ತರ ಪ್ರದೇಶದಲ್ಲಿ ಇವಿಎಂ ಬದಲಾವಣೆ ಆರೋಪ: ವಿರೋಧ ಪಕ್ಷಗಳ ಮಿಂಚಿನ ಪ್ರತಿಭಟನೆ

Update: 2019-05-21 08:07 GMT

ಲಕ್ನೋ, ಮೇ 21: ಬಿಜೆಪಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬದಲಾಯಿಸುತ್ತಿದೆ ಎಂದು ಆಪಾದಿಸಿ, ಎಸ್ಪಿ-ಬಿಎಸ್ಪಿ ಮೈತ್ರಿಕೂಟ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಚಂದೌಲಿಯಲ್ಲಿರುವ ನವೀನ್ ಕೃಷಿ ಮಂಡಿ ಸ್ಥಳದಲ್ಲಿ ಸೋಮವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಮೂರು ದಿನ ಬಾಕಿ ಇರುವಾಗ ಹೊಸ ವಿವಾದ ಹುಟ್ಟಿಕೊಂಡಿದೆ.

ಸಕಲ್‌ದಿಹ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಹೆಚ್ಚುವರಿ ಇವಿಎಂಗಳನ್ನು ತಂದ ಸಂದರ್ಭದಲ್ಲಿ ಈ ಘಟನೆ ನಡೆಯಿತು. ರವಿವಾರ ನಡೆದ ಏಳನೇ ಹಂತದಲ್ಲಿ ಚಂದೌಲಿಯಲ್ಲಿ ಮತದಾನ ನಡೆದಿತ್ತು. ಇವಿಎಂಗಳನ್ನು ಬದಲಾಯಿಸಲಾಗಿದೆ ಎಂಬ ಆರೋಪವನ್ನು ಆಡಳಿತವರ್ಗ ಅಲ್ಲಗಳೆದಿದೆ.

ಹೆಚ್ಚುವರಿ ಹಾಗೂ ಬಳಕೆ ಮಾಡದ ಇವಿಎಂಗಳನ್ನು ಸಕಲ್‌ದಿಹದಿಂದ ನವೀನ್ ಮಂಡಿ ಸ್ಥಳಕ್ಕೆ ತರಲಾಗಿದ್ದು, ಅದನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ ಎನ್ನುವುದು ಆಡಳಿತ ವರ್ಗದ ವಾದ. ಬಳಕೆ ಮಾಡದ 35 ಹೆಚ್ಚುವರಿ ಇವಿಎಂಗಳನ್ನು ಸಕಲ್‌ದಿಹ ತಾಲೂಕಿನಲ್ಲಿ ಇಡಲಾಗಿತ್ತು. ಇವುಗಳನ್ನು ರವಿವಾರ ಸಾಗಾಟ ಮಾಡಲಾಗಲಿಲ್ಲ. ಆದ್ದರಿಂದ ಸೋಮವಾರ ತರಲಾಗಿದ್ದು, ಪ್ರತ್ಯೇಕ ಸ್ಥಳದಲ್ಲಿ ಇದನ್ನು ಇಡಲಾಗುತ್ತದೆ" ಎಂದು ಜಿಲ್ಲಾ ಚುನಾವಣಾ ಅಧಿಕಾರಿ ನವನೀತ್ ಸಿಂಗ್ ಚಹಲ್ ಸ್ಪಷ್ಟನೆ ನೀಡಿದ್ದಾರೆ.

ಬಳಕೆ ಮಾಡಿದ ಇವಿಎಂಗಳನ್ನು ಈಗಾಗಲೇ ಭದ್ರತಾ ಕೊಠಡಿಯಲ್ಲಿ, ಗಣ್ಯಯರ ಸಮ್ಮುಖದಲ್ಲೇ ಇಡಲಾಗಿದೆ ಎಂದು ಹೇಳಿದ್ದಾರೆ. ಘಟನೆ ಬಳಿಕ ಜಿಲ್ಲಾಡಳಿತ ಎಲ್ಲ ಪಕ್ಷಗಳ ಮುಖಂಡರ ಜತೆ ಚರ್ಚಿಸಿ ವಿವಾದ ಬಗೆಹರಿಸಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ಬಿಡಿಆರ್ ತಿವಾರಿ ಹೇಳಿದ್ದಾರೆ.

ಇದಕ್ಕೂ ಮುನ್ನ ಸಕಲ್‌ದಿಹ ಶಾಸಕ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಪ್ರಭು ನಾರಾಯಣ ಯಾದವ್, ಗಾಝಿಪುರ ಎಸ್ಪಿ-ಬಿಎಸ್ಪಿ ಕೂಟದ ಅಭ್ಯರ್ಥಿ ಅಫ್ಝಲ್ ಅನ್ಸಾರಿ ಸೇರಿದಂತೆ ಹಲವು ಮುಖಂಡರು ಭದ್ರತಾ ಕೊಠಡಿಯ ಪಕ್ಕದಲ್ಲಿ ಧರಣಿ ನಡೆಸಿದರು. ಬೇರೆ ಜಿಲ್ಲೆಗಳ ಇವಿಎಂಗಳನ್ನು ಇಲ್ಲಿಗೆ ತರಲಾಗಿದೆ ಎಂಬ ಇವರ ಆರೋಪವನ್ನು ಜಿಲ್ಲಾಡಳಿತ ನಿರಾಕರಿಸಿದೆ. ವಿವಾದ ಬಗೆಹರಿಯದ ಹಿನ್ನೆಲೆಯಲ್ಲಿ ತಡರಾತ್ರಿ ವರೆಗೂ ಧರಣಿ ಮುಂದುವರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News