ಸುಪ್ರೀಂ ತರಾಟೆಯ ನಂತರ ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ: ಚುನಾವಣಾ ಆಯುಕ್ತ ಅಶೋಕ್ ಲಾವಸ

Update: 2019-05-21 07:26 GMT

ಹೊಸದಿಲ್ಲಿ, ಮೇ 21: ಚುನಾವಣಾ ಪ್ರಚಾರದ ವೇಳೆ ದ್ವೇಷದ ಭಾಷಣಗಳ ಕುರಿತಾದ ದೂರುಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ  ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿರುವುದರ ವಿರುದ್ಧ ಸುಪ್ರೀಂ ಕೋರ್ಟ್ ತನ್ನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ತಾವು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಒಂದು ನಿರ್ದಿಷ್ಟ ಸಮಯ ಮಿತಿಯೊಳಗೆ ಪಾರದರ್ಶಕವಾಗಿ ವಿಲೇವಾರಿಗೊಳಿಸುವಂತೆ ಸೂಚಿಸಿದ್ದಾಗಿ ಚುನಾವಣಾ ಆಯುಕ್ತ ಅಶೋಕ್ ಲಾವಸ ಹೇಳಿದ್ದಾರೆ.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿದ ತಮ್ಮ ನಿರ್ಧಾರದ ಬಗ್ಗೆ ಚರ್ಚಿಸಲು ಇಂದು ಆಯೋಜಿಸಲಾಗಿರುವ ಸಭೆಗಿಂತ ಮುಂಚಿತವಾಗಿ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ ಲಾವಸ, ಚುನಾವಣಾ ಆಯೋಗದ ಅಂತಿಮ ತೀರ್ಪು ನೀಡುವ ವೇಳೆ ಅಲ್ಪಸಂಖ್ಯಾತ ಅಭಿಪ್ರಾಯಗಳನ್ನೂ ದಾಖಲಿಸಿಕೊಳ್ಳಬೇಕೆಂಬ ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.

ಎಲ್ಲಾ ಸಂವಿಧಾನಿಕ ಸಂಸ್ಥೆಗಳು ಒಂದು ನಿರ್ದಿಷ್ಟ ಪ್ರಕ್ರಿಯೆಯನ್ವಯ ಕಾರ್ಯಾಚರಿಸುತ್ತವೆ ಹಾಗೂ ಚುನಾವಣಾ ಆಯೋಗವೂ ಸಂವಿಧಾನಿಕ ಸಂಸ್ಥೆಯಾಗಿರುವುದರಿಂದ ಅದು ಕೂಡ ನಿರ್ದಿಷ್ಟ ಪ್ರಕ್ರಿಯೆಯನ್ನು ಅನುಸರಿಸಬೇಕೆಂದು ಹೇಳಿದರು.

ತಮ್ಮ ನಿರ್ಧಾರ ಅಸ್ವಾಗತಾರ್ಹ ಹಾಗೂ ತಡೆಯಬಹುದಾದಂತಹ ಕ್ರಮ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಅವರ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ ಲಾವಸ, ಎಲ್ಲಾ ವಿವಾದಗಳೂ ಅಸ್ವಾಗತಾರ್ಹ. ಸರಿಯಾದ ಕ್ರಮಗಳನ್ನು ಕೈಗೊಂಡಲ್ಲಿ ಇಂತಹ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದರು

ಚುನಾವಣಾ ಆಯುಕ್ತರ ನಡುವೆ ಇರುವ ಭಿನ್ನಾಭಿಪ್ರಾಯಗಳಿಂದಾಗಿ ವಿಪಕ್ಷಗಳು ಆಯೋಗದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಲು ಅನುವು ಮಾಡಿಕೊಡುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನನಗೆ ಯಾವುದೇ ರಾಜಕೀಯ ವ್ಯಕ್ತಿ ಯಾ ಪಕ್ಷದೊಂದಿಗೆ ನಂಟಿಲ್ಲ, ಪಾರದರ್ಶಕ ಹಾಗೂ ಸಮಯ ಮಿತಿಯೊಳಗಿನ ಪ್ರಕ್ರಿಯೆ ನನಗೆ ಬೇಕು” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News