ಮಡಿಕೇರಿಯ 13 ಗ್ರಾಮಗಳು ಸೂಕ್ಷ್ಮ ಪ್ರದೇಶ: ಜಿಲ್ಲಾಡಳಿತ ಘೋಷಣೆ

Update: 2019-05-21 12:04 GMT
ಸಾಂದರ್ಭಿಕ ಚಿತ್ರ

ಮಡಿಕೇರಿ, ಮೇ 21: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ (2019-2020) ಸಾಲಿನ ಮುಂಗಾರು ಮಳೆಯಲ್ಲಿ ಭೂ ಕುಸಿತ ಉಂಟಾಗಬಹುದಾದ ಕೆಲವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅದರಂತೆ ಅಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತೆಯಾಗಿ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಕ್ರಮಕೈಗೊಂಡಿದೆ.

ಭಾರತೀಯ ಸರ್ವೇಕ್ಷಣಾ ಇಲಾಖೆಯ ಮಧ್ಯಂತರ ವರದಿಯನ್ನು ಆಧರಿಸಿ, ಕರ್ನಾಟಕ ರಾಜ್ಯ ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ, ಯುನಿಸೆಫ್ ಮುಂತಾದ ಸಂಸ್ಥೆಗಳೊಂದಿಗೆ ಚರ್ಚಿಸಿದ ಬಳಿಕ ಮಡಿಕೇರಿ ತಾಲೂಕಿನಲ್ಲಿ 13 ಸ್ಥಳಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಮಡಿಕೇರಿ ತಾಲೂಕಿನ ನಿಡವಟ್ಟು, ಬಾರಿಬೆಳ್ಳಚ್ಚು, ಹೆಬ್ಬೆಟ್ಟಗೇರಿ, ದೇವಸ್ತೂರು, ತಂತಿಪಾಲ, ಹಾಡಗೇರಿ, ಮುಕ್ಕೋಡ್ಲು, ಮೇಘತ್ತಾಳು, ಮಕ್ಕಂದೂರು, ಉದಯಗಿರಿ, ಕಾಟಕೇರಿ, ಮದೆ(ಜೋಡುಪಾಲ) ಹಾಗೂ 2ನೇ ಮೊಣ್ಣಂಗೇರಿ ಗ್ರಾಮಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದ್ದು, ಈ ಪ್ರದೇಶಗಳಲ್ಲಿ ಈ ಬಾರಿಯ ಮುಂಗಾರು ಮಳೆಯಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಈ ಪ್ರದೇಶಗಳಲ್ಲಿ ಮುಂಜಾಗ್ರತೆಯಾಗಿ ತುರ್ತು ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಜಿಲ್ಲಾಡಳಿತದ ವತಿಯಿಂದ ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಅಗತ್ಯ ತುರ್ತು ಸಂದರ್ಭಗಳಲ್ಲಿ ಈ ಸೂಕ್ಷ್ಮ ಪ್ರದೇಶಗಳ ಸಾರ್ವಜನಿಕರು ಸಂಬಂಧಿಸಿದ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ನೆರವು ಹಾಗೂ ಸಲಹೆ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಲ್ಲಿ ತುರ್ತಾಗಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಪೊಲೀಸ್, ಅಗ್ನಿಶಾಮಕ, ಅರಣ್ಯ ಹಾಗೂ ವಿದ್ಯುತ್ ಇಲಾಖೆಗಳೂ ತಮ್ಮ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡುತ್ತಿವೆ. ಅಲ್ಲದೆ ಇಂತಹ ಸೂಕ್ಷ್ಮ ಪ್ರದೇಶಗಳ ಜನರಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ವಹಿಸಬೇಕಾದ ತುರ್ತು ಕ್ರಮಗಳ ಬಗ್ಗೆ ಸಂಘಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು ಮತ್ತು ನೋಡಲ್ ಅಧಿಕಾರಿಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮುಂಬರುವ ಮಳೆಗಾದಲ್ಲಿ ವಿಕೋಪಗಳು ಎದುರಾದಲ್ಲಿ ಅದನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ, ವದಂತಿಗಳನ್ನು ಹರಡದೆ, ಎದೆಗುಂದದೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಜಿಲ್ಲೆಗೆ ಆಮಿಸುವ ಪ್ರವಾಸಿಗರು ಕೂಡಾ ಜಿಲ್ಲಾಡಳಿತ ಆಗಿಂದಾಗ್ಗೆ ನೀಡುವ ಸೂಚನೆಗಲನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮುಂಜಾಗ್ರತೆ ವಹಿಸಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ನೋಡಲ್ ಅಧಿಕಾರಿಗಳ ನೇಮಕ: ನಿಡುವಟ್ಟು, ಬಾರಿಬೆಳ್ಳಚ್ಚು, ಹೆಬ್ಬೆಟ್ಟಗೇರಿ ಹಾಗೂ ದೇವಸ್ತೂರು ಗ್ರಾಮಗಳಿಗೆ ಕೃಷಿ ಇಲಾಖೆಯ ಉಪ ನಿರ್ದೇಶಕ ರಾಜು ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ಸಾರ್ವಜನಿಕರು ಅವರನ್ನು ದೂರವಾಣಿ ಸಂಖ್ಯೆ 8277931901, 9900594717ರಲ್ಲಿ ಸಂಪರ್ಕಿಸಬಹುದಾಗಿದೆ.

ತಂತಿಪಾಲ, ಹಾಡಗೇರಿ, ಮುಕ್ಕೋಡ್ಲು, ಮೇಘತ್ತಾಳು ಗ್ರಾಮಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವಿನ್ ಅವರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದ್ದು, ಅವರನ್ನು 9886907455ರಲ್ಲಿ ಮತ್ತು ಮಕ್ಕಂದೂರು, ಉದಯಗಿರಿ ಗ್ರಾಮಗಳಿಗೆ ಸಮಗ್ರ ಗಿರಿನ ಅಭಿವೃದ್ಧಿ ಯೋಜನೆಯ ಅಧಿಕಾರಿ ಶಿವಕುಮಾರ್ ಅವರನ್ನು ನೇಮಿಸಲಾಗಿದ್ದು, ಅವರನ್ನು 9741999571ರಲ್ಲಿ ಸಂಪರ್ಕಿಸಬಹುದಾಗಿದೆ.

ಉಳಿದಂತೆ ಕಾಟಕೇರಿ, ಮದೆ(ಜೋಡುಪಾಲ), 2ನೇ ಮೊಣ್ಣಂಗೇರಿ ಗ್ರಾಮಗಳಿಗೆ ಜಿಲ್ಲಾ ನಗರಾಭಿವೃಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರ ಹೇಮಂತ್‍ಕುಮಾರ್ ಅವರನ್ನು ನಿಯೋಜಿಸಲಾಗಿದ್ದು, ಅವರನ್ನು 9980240966ರಲ್ಲಿ ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News