ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಹೊಗಳಿದ ಶಿವಸೇನೆ

Update: 2019-05-21 15:57 GMT

ಮುಂಬೈ,ಮೇ.21: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಎರಡನೇ ಅವಧಿಗೆ ಅಧಿಕಾರಕ್ಕೇರುತ್ತದೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿರುವ ಶಿವಸೇನೆ ಅದೇ ವೇಳೆ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದೆ.

ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಈ ಚುನಾವಣೆಯಲ್ಲಿ ಬಹಳ ಶ್ರಮಪಟ್ಟಿದ್ದಾರೆ. ಅವರ ಪಕ್ಷ ನೂತನ ಲೋಕಸಭೆಯಲ್ಲಿ ವಿಪಕ್ಷ ನಾಯಕ ಸ್ಥಾನ ಪಡೆಯುವಷ್ಟು ಸ್ಥಾನಗಳನ್ನು ಗೆಲ್ಲಲಿದೆ ಎಂದು ಶಿವಸೇನೆ ಭರವಸೆ ವ್ಯಕ್ತಪಡಿಸಿದೆ. 543 ಸದಸ್ಯ ಬಲದ ಲೋಕಸಭೆಯ 542 ಸ್ಥಾನಗಳಿಗೆ ಏಳು ಹಂತಗಳಲ್ಲಿ ನಡೆದ ಮತದಾನ ರವಿವಾರ ಅಂತ್ಯಗೊಂಡಿದ್ದು ಮೇ 23ರಂದು ಫಲಿತಾಂಶ ಹೊರಬೀಳಲಿದೆ. ಈ ಮಧ್ಯೆ ಬಹುತೇಕ ಎಲ್ಲ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಸ್ಪಷ್ಟ ಬಹುಮತ ಗಳಿಸಲಿದೆ ಎಂದು ಭವಿಷ್ಯ ನುಡಿದಿವೆ. ಮೋದಿ ಸರಕಾರ ಎರಡನೇ ಅವಧಿಗೆ ಆಯ್ಕೆಯಾಗುತ್ತದೆ ಎಂದು ಯಾವ ರಾಜಕೀಯ ಪಂಡಿತನೂ ಹೇಳುವ ಅಗತ್ಯವಿಲ್ಲ. ಜನರೇ ಮತ್ತೊಮ್ಮೆ ಮೋದಿಯವರನ್ನು ಅಧಿಕಾರಕ್ಕೆ ತರಬೇಕು ಎಂದು ಮೊದಲೇ ಮನಸ್ಸು ಮಾಡಿದ್ದರು ಎಂದು ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಶಿವಸೇನೆ ತಿಳಿಸಿದೆ.

ಸಂಪಾದಕೀಯದಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿರುವ ಶಿವಸೇನೆ, ಈ ಬಾರಿ ಕಾಂಗ್ರೆಸ್ ಒಂದು ಪ್ರಬಲ ವಿಪಕ್ಷವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದೆ. 2014ರಲ್ಲಿ ರಾಹುಲ್ ಗಾಂಧಿ ವಿಪಕ್ಷ ನಾಯಕ ಸ್ಥಾನ ಪಡೆಯುವಷ್ಟೂ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಲೋಕಸಭೆಯಲ್ಲಿ ಕಾಂಗ್ರೆಸ್ ವಿಪಕ್ಷ ನಾಯಕ ಸ್ಥಾನ ಪಡೆದುಕೊಳ್ಳಲಿದೆ. ಇದು ಖಂಡಿತವಾಗಿಯೂ ರಾಹುಲ್ ಗಾಂಧಿಯ ಗೆಲುವಾಗಿದೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ ಅಭಿಪ್ರಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News