ಇವಿಎಂ ತಿರುಚಿದ ಆರೋಪಕ್ಕೆ ಚು.ಆಯೋಗ ಯಾಕೆ ಸ್ಪಷ್ಟೀಕರಣ ನೀಡುತ್ತಿಲ್ಲ?: ಮಾಜಿ ಮುಖ್ಯ ಚುನಾವಣಾ ಆಯುಕ್ತ

Update: 2019-05-21 16:34 GMT

ಹೊಸದಿಲ್ಲಿ, ಮೇ.21: ಉತ್ತರ ಪ್ರದೇಶ ಮತ್ತು ಬಿಹಾರದ ಕೆಲವು ಕಡೆಗಳಲ್ಲಿ ಇವಿಎಂಗಳನ್ನು ಸಾಗಿಸಲಾಗುತ್ತಿರುವ ಬಗ್ಗೆ ಉಂಟಾಗಿರುವ ವಿವಾದದ ಬಗ್ಗೆ ಚುನಾವಣಾ ಆಯೋಗ ಯಾಕೆ ನಿಜಾಂಶವನ್ನು ಸ್ಪಷ್ಟಪಡಿಸುತ್ತಿಲ್ಲ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ ಖುರೇಶಿ ಪ್ರಶ್ನಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಇವಿಎಂಗಳನ್ನು ಸಾಗಾಟ ಮಾಡುತ್ತಿರುವ ಹಲವು ವೀಡಿಯೊಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಇದರಿಂದ ಮತಯಂತ್ರಗಳನ್ನು ತಿರುಚಲಾಗುತ್ತಿದೆ ಎಂಬ ಅನುಮಾನ ಜನರಲ್ಲಿ ಮೂಡಿದೆ ಎಂದು ಮಾಜಿ ಸಿಇಸಿ ತಿಳಿಸಿದ್ದಾರೆ. ಬಿಜೆಪಿಯ ಸೂಚನೆಯಂತೆ ಸ್ಟ್ರಾಂಗ್ ರೂಂನಲ್ಲಿರುವ ಇವಿಎಂಗಳನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಿ ಉತ್ತರ ಪ್ರದೇಶದ ಗಾಝೀಪುರ್, ಚಂದೌಲಿ, ದೊಮರಿಯಗಂಜ್ ಮತ್ತು ಝಾನ್ಸಿಯಲ್ಲಿ ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿದವು. ಆದರೆ ಈ ಆರೋಪಗಳನ್ನು ತಳ್ಳಿ ಹಾಕಿರುವ ಚುನಾವಣಾ ಆಯೋಗ ಈ ಆರೋಪಗಳು ಸುಳ್ಳು ಮತ್ತು ಆಧಾರರಹಿತ ಎಂದು ತಿಳಿಸಿದೆ.

ಮತದಾರರ ತೀರ್ಪನ್ನು ತಿರುಚಿರುವ ಆರೋಪದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಇವಿಎಂಗಳ ಸುರಕ್ಷತೆ ಮತ್ತು ಭದ್ರತೆ ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ. ಪ್ರಜಾಪ್ರಭುತ್ವದ ಆಧಾರವನ್ನೇ ಪ್ರಶ್ನಿಸುವ ಇಂತಹ ಅನುಮಾನಗಳಿಗೆ ಎಡೆಮಾಡಿಕೊಡಬಾರದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News