ರೈತರಿಗೆ ಬೆಳೆ ನಷ್ಟ ಪರಿಹಾರ ಶೀಘ್ರ ಪಾವತಿಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ: ಸಚಿವ ದೇಶಪಾಂಡೆ

Update: 2019-05-21 16:34 GMT

ಬೆಂಗಳೂರು, ಮೇ 21: ರಾಜ್ಯದ ತೀವ್ರ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಉದ್ಯೋಗ ಸೃಷ್ಟಿ, ಮೇವಿನ ಕೊರತೆಯಾಗದಂತೆ ಎಲ್ಲ ಕ್ರಮಗಳನ್ನು ಆದ್ಯತೆ ಮೇಲೆ ಕೈಗೊಳ್ಳುವುದರ ಜೊತೆಗೆ ಕಳೆದ ಸಾಲಿನ ಮುಂಗಾರಿನಲ್ಲಿ ಬೆಳೆ ನಷ್ಟ ಸಂತ್ರಸ್ತ ರೈತರ ಪಾಲಿನ ಪರಿಹಾರ ಹಣವನ್ನು ಕೂಡಲೇ ಪಾವತಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. 

ಜೊತೆಗೆ ಜನ ಹಾಗೂ ಜಾನುವಾರುಗಳಿಗೆ ಯಾವುದೇ ಸಂದರ್ಭದಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ನಿಗಾ ವಹಿಸುವುದು. ಹೊಸ ಬೋರ್‌ವೆಲ್‌ಗಳನ್ನು ಕೊರೆಯುವ ಬದಲು ಖಾಸಗಿ ಬೋರ್‌ವೆಲ್‌ಗಳನ್ನು ಪಡೆಯಲು ಆದ್ಯತೆ ನೀಡುವುದು. ಕುಡಿಯುವ ನೀರಿನ ಬಾಕಿ ಬಿಲ್ಲನ್ನು ಪ್ರತಿ 15 ದಿನಗಳಿಗೊಮ್ಮೆ ಕಡ್ಡಾಯವಾಗಿ ಪಾವತಿಸುವುದು. ಕುಡಿಯುವ ನೀರು ಸರಬರಾಜು ಟ್ಯಾಂಕರ್‌ಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸುವ ಮೂಲಕ ದುರುಪಯೋಗ ತಡೆಗಟ್ಟುವುದು, ಮೇವು ಬ್ಯಾಂಕ್ ತೆರೆಯಲು ಆದ್ಯತೆ ನೀಡಬೇಕೆಂದು ತಿಳಿಸಿದ್ದಾರೆ. ಸರಕಾರೇತರ ಸಂಸ್ಥೆಗಳು ಗೋಶಾಲೆ ತೆರೆಯಲು ಮುಂದೆ ಬಂದಲ್ಲಿ ಪ್ರೋತ್ಸಾಹಿಸುವುದು, ಹಸಿರು ಮೇವು ಬೆಳೆಸುವ ಸಲುವಾಗಿ ವಿತರಿಸಿದ ಮಿನಿ ಕಿಟ್‌ನ ಸಮರ್ಪಕ ಬಳಕೆ ಬಗ್ಗೆ ಪರಿಶೀಲಿಸುವುದು, ಜನ ಗುಳೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಸೂಕ್ತ ಉದ್ಯೋಗ ಸೃಜನೆ, ಸಕಾಲಿಕ ವೇತನ ಪಾವತಿ ಸೇರಿದಂತೆ ಎಲ್ಲ ಪರಿಹಾರ ಕ್ರಮಗಳನ್ನು ಆದ್ಯತೆ ಮೇಲೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ರಾಜ್ಯದ ಮಳೆ ಬೆಳೆ, ಬರ ಪರಿಸ್ಥಿತಿ ಕುರಿತು ಅವಲೋಕಿಸಲು ಮತ್ತು ಕೈಗೊಳ್ಳಬೇಕಾದ ಪರಿಹಾರ ಕ್ರಮಗಳನ್ನು ಕುರಿತು ವಿಧಾನಸೌಧದಲ್ಲಿ ತಮ್ಮ ನೇತೃತ್ವದ ಸಚಿವ ಸಂಪುಟ ಉಪಸಮಿತಿಯ ಸಭೆ ನಡೆಸಿದ ಸಚಿವರು ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಕುರಿತಂತೆ ಈ ಕೆಳಕಂಡ ವಿವರಗಳನ್ನು ನೀಡಿದರು. ಹಸಿರು ಮೇವಿನ ಖರೀದಿ ದರ ಪ್ರತಿ ಟನ್‌ಗೆ ಈಗಿರುವ 1,500 ರಿಂದ 3 ಸಾವಿರಕ್ಕೆ ಹೆಚ್ಚಳ. ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಕುರಿ ಮತ್ತು ಮೇಕೆಗಳಿಗೆ ಜಂತುನಾಶಕ ಮತ್ತು ಲವಣ ಮಿಶ್ರಣ ಔಷಧಿ ಖರೀದಿಗಾಗಿ 5.00 ಕೋಟಿ ಅನುದಾನ ನೀಡಲಾಗಿದೆ ಎಂದರು. ಅಂತರಾಜ್ಯ ಮೇವು ಸಾಗಾಣಿಕೆಗೆ ಜು.31ರವರೆಗೆ ನಿರ್ಬಂಧ ವಿಧಿಸಲಾಗುವುದು. ವಿಜಯಪುರ ಜಿಲ್ಲೆಗೆ ತುರ್ತು ಬರ ಪರಿಹಾರ ಕ್ರಮಗಳಿಗಾಗಿ ಎಸ್‌ಡಿಆರ್‌ಎಫ್ ನಿಧಿಯಿಂದ 10.00 ಕೋಟಿ ಅನುದಾನ ಬಿಡುಗಡೆ. ಬಾಗಲಕೋಟೆ ಜಿಲ್ಲೆಯಲ್ಲಿನ ಬ್ಯಾರೇಜ್ ಗೇಟ್ ನಿರ್ವಹಣೆಗಾಗಿ ಸಣ್ಣ ನೀರಾವರಿ ಇಲಾಖೆಯಿಂದ 15.00 ಲಕ್ಷ ಅನುದಾನ. ಬೆಳೆ ಹಾನಿ ಹೊಂದಿರುವ ಜಮೀನಿನ ರೈತರು ಮರಣ ಹೊಂದಿದ್ದಲ್ಲಿ, ಫಲಾನುಭವಿ ರೈತರ ಸಕ್ಷಮ ವಾರಸುದಾರರಿಗೆ ಇನ್‌ಪುಟ್ ಸಬ್ಸಿಡಿ ವಿತರಿಸಲು ಸಂಬಂಧಪಟ್ಟ ತಹಶೀಲ್ದಾರರಿಗೆ ಅಧಿಕಾರ. ಜಮೀನು ಜಂಟಿ ಖಾತೆಯಿದ್ದಲ್ಲಿ, ತನಿಖೆ ನಡೆಸಿ ಅರ್ಹ ಫಲಾನುಭವಿ ರೈತರಿಗೆ ಇನ್‌ಪುಟ್ ಸಬ್ಸಿಡಿ ವಿತರಿಸುವ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಲು ಸಂಬಂಧಪಟ್ಟ ತಹಶೀಲ್ದಾರರಿಗೆ ಅಧಿಕಾರ ನೀಡಲಾಗುವುದು ಎಂದು ತಿಳಿಸಿದರು.

ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲು ತಹಶೀಲ್ದಾರುಗಳಿಗೆ ಸಂಪೂರ್ಣ ಅಧಿಕಾರ. ಅಲ್ಲದೇ, 2018ರ ಮುಂಗಾರು ಹಂಗಾಮಿನಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಕೊಡಗು ಹಾಗೂ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಅಪಾರ ಹಾನಿಯಾಗಿರುವುದನ್ನು ಮನಗಂಡು ಈ ಬಾರಿ ಮುಂಗಾರು ಆರಂಭಕ್ಕೆ ಮುನ್ನವೇ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 2 ಸುಸಜ್ಜಿತ ರಾಷ್ಟ್ರೀಯ ವಿಪತ್ತು ಸ್ಪಂದನ ಪಡೆಗಳನ್ನು ಮೇ 25ರಿಂದಲೇ ನಿಯೋಜಿಸಲಾಗುವುದು ಎಂದು ಹೇಳಿದರು.

ಕೃಷಿ ಇಲಾಖೆಯು ಬಿತ್ತನೆ ಬೀಜ, ಗೊಬ್ಬರಗಳನ್ನು ಸಾಕಷ್ಟು ದಾಸ್ತಾನು ಇಟ್ಟುಕೊಂಡು ಮುಂಬರುವ ಮುಂಗಾರು ಹಂಗಾಮಿನಲ್ಲಿ ಸಕಾಲದಲ್ಲಿ ರೈತರಿಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News