ಪತ್ರಕರ್ತನ ಮೇಲೆ ಹಲ್ಲೆ ಪ್ರಕರಣ: ಪತ್ರಕರ್ತರಿಂದ ಪೊಲೀಸ್ ಠಾಣೆ ಎದುರು ಧರಣಿ

Update: 2019-05-21 16:54 GMT

ದಾವಣಗೆರೆ, ಮೇ 21: ಪತ್ರಕರ್ತನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದನ್ನು ವಿರೋಧಿಸಿ ಪತ್ರಕರ್ತರು ಸೋಮವಾರ ನಗರದ ಬಡಾವಣೆ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು.

ಕೇಂದ್ರ ವೃತ್ತ ನಿರೀಕ್ಷಕರ ಕಚೇರಿ ಇರುವ ಬಡಾವಣೆ ಠಾಣೆ ಆವರಣದಲ್ಲಿ ಜಮಾಯಿಸಿದ್ದ ಮಾಧ್ಯಮದವರು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬರುವವರೆಗೂ ಜಾಗ ಬಿಟ್ಟು ಕದಲುವುದಿಲ್ಲವೆಂದು ಪಟ್ಟು ಹಿಡಿದರು.

ಕೊಲೆ ಕೇಸ್ ಸಂಬಂಧ ಮಹಜರು ನಡೆಸುವಾಗ ಸ್ಥಳೀಯ ಪತ್ರಿಕೆ ವರದಿಗಾರ ಶಂಭು(ಕೆ.ಎಸ್.ಚನ್ನಬಸಪ್ಪ) ಎಂಬುವರಿಗೆ ದಫೇದಾರ್ ಮಂಜುನಾಥ ನಾಯ್ಕ ವಿನಾಕಾರಣ ಕಪಾಳಮೋಕ್ಷ ಮಾಡುವ ಮೂಲಕ ದರ್ಪ ಮೆರೆದಿದ್ದಾನೆ. ಅಲ್ಲದೆ, ವೃತ್ತ ನಿರೀಕ್ಷಕನ ಕುಮ್ಮಕ್ಕಿನಿಂದ ಪತ್ರಕರ್ತನ ಬಂಧನಕ್ಕೂ ಮುಂದಾಗಿದ್ದಾನೆ. ಸ್ಥಳದಲ್ಲಿದ್ದ ಸಿಪಿಐ ಆನಂದ್ ಕೂಡ ಪತ್ರಕರ್ತನಿಗೆ ಬೆದರಿಕೆ ಹಾಕಿ ದಬಾಯಿಸಿದ್ದಾರೆ. ಕೂಡಲೇ ಹಲ್ಲೆ ಮಾಡಿದ ಮುಖ್ಯಪೇದೆಯನ್ನು ಅಮಾನರು ಮಾಡುವ ಜೊತೆಗೆ ವೃತ್ತ ನಿರೀಕ್ಷಕರಿಂದ ಕ್ಷಮೆ ಕೇಳಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಎಸ್ಪಿ ಆರ್.ಚೇತನ್ ಪ್ರತಿಭಟನಾನಿರತ ಮಾಧ್ಯಮದವರನ್ನು ಸಮಾಧಾನ ಪಡಿಸಲೆತ್ನಿಸಿದರು. ಮುಂದಿನ ದಿನಗಳಲ್ಲಿ ಹೀಗಾಗದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮಾಧ್ಯಮದವರು ಧರಣಿ ಹಿಂಪಡೆದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News