ಗೋಡ್ಸೆ ದಿನಾಚರಣೆಯಿಂದ ದೇಶ ಎತ್ತ ಸಾಗುತ್ತಿದೆ ಎಂಬ ಆತಂಕ: ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ

Update: 2019-05-21 17:05 GMT

ಮೈಸೂರು,ಮೇ.21: ಅಹಿಂಸಾತ್ಮಕವಾಗಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಅವರನ್ನು ವಿಶ್ವದ ಇತರೆಡೆ ಸ್ಮರಿಸುತ್ತಿದ್ದರೆ, ಅವರನ್ನು ಅಮಾನವೀಯವಾಗಿ ಕೊಲೆ ಮಾಡಿದ ನಾಥುರಾಂ ಗೋಡ್ಸೆ ದಿನಾಚರಣೆಗೆ ಹಲವರು ಮುಂದಾಗಿರುವುದನ್ನು ಗಮನಿಸಿದಾಗ ದೇಶ ಎತ್ತ ಸಾಗುತ್ತಿದೆ ಎಂಬ ಆತಂಕ ಮೂಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಸಂಘವು ಆಯೋಜಿಸುತ್ತಿರುವ ಬರ ಮುಕ್ತ ಕರ್ನಾಟಕ ಆಂದೋಲನ ಕುರಿತ ಮಾತನಾಡಿದರು. ಇದೇ ವೇಳೆ, ಬೆಟ್ಟದಪುರ ಠಾಣೆಯಲ್ಲಿ ರೈತ ಸಂಘದ ಮುಖಂಡರೊಬ್ಬರಿಗೆ ಪೊಲೀಸ್ ಅಧಿಕಾರಿ ಕಿರುಕುಳ ನೀಡಿದರೆನ್ನಲಾದ ಘಟನೆ ಕುರಿತಂತೆ ಮಾತಮಾಡಿ, ರೈತ ಸಂಘ ಕೂಡಲೇ ಪ್ರತಿಭಟನೆ ನಡೆಸಿದ ಕಾರಣ ಅಲ್ಲಿನ ಅಧಿಕಾರಿಗೆ ಶಿಕ್ಷಾರ್ಹ ವರ್ಗಾವಣೆ ಮಾಡಿದ್ದರೂ, ಇಷ್ಟಕ್ಕೇ ರೈತ ಸಂಘ ಸುಮ್ಮನಾಗುವುದಿಲ್ಲ. ಬದಲಾಗಿ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದೆ. ಆ ರೀತಿ ಮಾಡದಿದ್ದಲ್ಲಿ ಮತ್ತೆ ಹೋರಾಟ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.

ಇನ್ನು, ರಾಜ್ಯ ಬರಗಾಲ ಪರಿಸ್ಥಿತಿಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದು, ಸರ್ಕಾರದ ಈ ನಿಟ್ಟಿನ ಕಾರ್ಯಕ್ರಮಕ್ಕೂ ತಮ್ಮ ರೈತ ಸಂಘ ಬೆಂಬಲ ನೀಡಲಿದೆ.

ಇದೇ ಸಂದರ್ಭದಲ್ಲಿ ಶಾಶ್ವತವಾಗಿ ರಾಜ್ಯವನ್ನು ಬರಮುಕ್ತಗೊಳಿಸುವ ಹಿನ್ನೆಲೆಯಲ್ಲಿ ಕಳೆದ 17 ರಿಂದ 19 ರವರೆಗೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಡಾ. ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ಪ್ರೊ.ರವಿವರ್ಮಕುಮಾರ್, ಯತಿರಾಜ್ ಹಾಗೂ ಇತರ ಆಸಕ್ತರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ಬರಮುಕ್ತ ಕರ್ನಾಟಕ ಆಂದೋಲನ ತರಬೇತಿ ಶಿಬಿರದಲ್ಲಿ ಕೈಗೊಂಡ ಐದು ಅಂಶಗಳ ಕಾರ್ಯಕ್ರಮಕ್ಕೆ ತಮ್ಮ ರೈತಸಂಘ ಬೆಂಬಲ ವ್ಯಕ್ತಪಡಿಸಿ ಸಹಕರಿಸಲಿದೆ. ಆ ಆಂದೋಲನದಲ್ಲಿ ವರ್ಷಕ್ಕೆ ಸಾವಿರದಂತೆ ಕಾರ್ಯಕರ್ತರನ್ನು ತರಬೇತುಗೊಳಿಸಿ ಬಳಸಿಕೊಳ್ಳಲಿದ್ದು, ಅವರು ಕೆರೆ, ಕುಂಟೆ ಒತ್ತುವರಿ ತೆರವು, ಅದರ ಸಂರಕ್ಷಣೆ, ಸರ್ಕಾರ ರೂಪಿಸಿ ಜಾರಿಗೆ ತರಲು ಉದ್ದೇಶಿಸಿರುವ ಜಲಾಮೃತ ಹಾಗೂ ಇತರೆ ಯೋಜನೆಗಳ ಜಾರಿಯಲ್ಲಿ ಗುತ್ತಿಗೆದಾರರು ಮತ್ತು ಮಧ್ಯಸ್ಥಿಕೆದಾರರನ್ನು ದೂರ ಇರಿಸಿ ಜನಸಮುದಾಯ ಕಾರ್ಯಕ್ರಮವನ್ನಾಗಿಸುವ ನಿಟ್ಟಿನಲ್ಲಿ ಮುಂದಾಳತ್ವ ಮೊದಲಾದವುಗಳಲ್ಲಿ ಪಾಲ್ಗೊಳ್ಳಲಿದ್ದಾರೆಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಹುಣಸೂರು, ಪಿರಿಯಾಪಟ್ಟಣಗಳಲ್ಲಿ ತಂಬಾಕು ಬದಲಿಗೆ ಶ್ರೀಗಂಧ ಮೊದಲಾದ ಉಪ ಬೆಳೆಯನ್ನೂ ಲಾಭದಾಯಕವಾಗಿ ಕೈಗೊಳ್ಳುವ ನಿಟ್ಟಿನಲ್ಲಿ ರೈತ ಸಂಘ ಕಾರ್ಯ ನಿರತವಾಗಲಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಹೊಸಕೋಟೆ ಬಸವರಾಜ್, ಹೊಸೂರು ಕುಮಾರ್, ಪಿ. ಮರಂಕಯ್ಯ, ಮಂಡಕಳ್ಳಿ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News