'ಗೋಡ್ಸೆ ದೇಶಭಕ್ತ' ಎಂದ ಪ್ರಜ್ಞಾಸಿಂಗ್ ಳನ್ನು ಗಡಿಪಾರು ಮಾಡಿ: ಪ್ರಗತಿಪರ ಚಿಂತಕರ ಆಗ್ರಹ

Update: 2019-05-21 17:08 GMT
ಪ್ರಜ್ಞಾಸಿಂಗ್

ಮೈಸೂರು,ಮೇ.21: ನಾಥೂರಾಮ್ ಗೂಡ್ಸೆ ಒಬ್ಬ ದೇಶಭಕ್ತನೆಂದು ಹೇಳಿರುವ ಪ್ರಜ್ಞಾಸಿಂಗ್ ಅವಳನ್ನು ಈ ಕೂಡಲೇ ಪಕ್ಷದಿಂದ ಉಚ್ಚಾಟಿಸಿ ಗಡಿಪಾರು ಮಾಡಬೇಕೆಂದು ಪ್ರಗತಿಪರ ಚಿಂತಕರು ಒಕ್ಕೊರಲಿನಿಂದ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರೊ.ಮಹೇಶ್ಚಂದ್ರಗುರು, ಸಾಧ್ವಿ ವಿರುದ್ಧ ಪ್ರಧಾನಿ ಮೋದಿಯವರು ಕ್ರಮಕೈಗೊಳ್ಳದೆ ಪರೋಕ್ಷವಾಗಿ ಬೆಂಬಲಿಸುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಪ್ರತಾಪ್ ಸಿಂಹ, ಸಾಧ್ವಿಸಿಂಗ್, ಅನಂತಕುಮಾರ್ ಹೆಗಡೆ, ನಳೀನ್‍ಕುಮಾರ್ ಕಟೀಲ್, ತೇಜಸ್ವಿ ಸೂರ್ಯ ಇವರುಗಳಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ರಾಜಕೀಯ ಭಯೋತ್ಪಾದಕರನ್ನು ಹುಟ್ಟುಹಾಕುತ್ತಿದೆ ಎಂದು ಹರಿಹಾಯ್ದರು.

ವಿದ್ಯುನ್ಮಾನ ಮಾಧ್ಯಮಗಳ ಬಗ್ಗೆ ಹರಿಹಾಯ್ದ ಪ್ರೊ.ಮಹೇಶ್ಚಂದ್ರ ಗುರು ಎಲೆಕ್ಟ್ರಾನಿಕ್ ಮಾಧ್ಯಮವೆನ್ನುವುದು ಮನೆಹಾಳು ಮಾಧ್ಯಮ, ಮಾಲಕನ ಮಾಧ್ಯಮ. ಭಾವನಾತ್ಮಕ ವಿಷಯಗಳ ಮೂಲಕ ಜಾತಿ, ಧರ್ಮ, ಭಾಷೆ ದೇಶ ಸಂಘರ್ಷಕ್ಕೆ ಪ್ರಚೋದನೆ ನೀಡುತ್ತದೆ ಎಂದರು.

ಎಕ್ಸಿಟ್ ಪೋಲ್ ಎನ್ನುವುದು ಕಪೋಲಕಲ್ಪಿತ ಸುಳ್ಳಿನ ಕಂತೆಯ, ದುರುದ್ದೇಶ ಪೂರಿತ ವರದಿ. ಮೇ.23ರಂದು ನೈಜ ಹಾಗೂ ಮಾನವತಾವಾದಕ್ಕೆ ಗೆಲುವು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಪುಟ್ಟಸಿದ್ಧಶೆಟ್ಟಿ ಮಾತನಾಡಿ, ನಾಥೂರಾಮ್ ಗೂಡ್ಸೆ ಬಗ್ಗೆ ಪ್ರಜ್ಞಾ ನೀಡಿರುವ ಹೇಳಿಕೆಯು ಮನುವಾದಿಯನ್ನು ಪ್ರಸ್ತುತ ಪಡಿಸುತ್ತಿದೆ, ಅವರ ವಿರುದ್ಧ ಬಿಜೆಪಿ ಇದುವರೆಗೂ ಯಾಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಪ್ರಗತಿಪರ ಚಿಂತಕರಾದ ಪ್ರೊ.ಶಬ್ಬೀರ್ ಮುಸ್ತಾಫ, ಪ್ರೊ.ನಂಜರಾಜೇ ಅರಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News