ರಾಜಕೀಯ ಜೀವನ ಅಂತ್ಯವಾಗಿಲ್ಲ, ಶೀಘ್ರದಲ್ಲಿಯೇ 2ನೇ ಇನ್ಸಿಂಗ್ ಆರಂಭ: ಸಂಸದ ಮುದ್ದಹನುಮೇಗೌಡ

Update: 2019-05-21 17:16 GMT

ತುಮಕೂರು, ಮೇ 21: ತುಮಕೂರು ಜಿಲ್ಲೆಯಲ್ಲಿ ನನ್ನ ರಾಜಕೀಯ ಜೀವನ ಇನ್ನೂ ಅಂತ್ಯವಾಗಿಲ್ಲ. ಶೀಘ್ರದಲ್ಲಿಯೇ ಎರಡನೇ ಇನ್ಸಿಂಗ್ ಆರಂಭಿಸಲಿದ್ದೇನೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹದಿನಾರನೇ ಲೋಕಸಭೆಗೆ ಆಡಳಿತ ವಿರೋಧಿ ಅಲೆ ನಡುವೆ ಗೆದ್ದ 44 ಜನರಲ್ಲಿ ನನಗೆ ಬಹುಮತ ನೀಡಿದ ಜನರಿಗೆ ಋಣಿಯಾಗಿದ್ದೀನಿ, ಲೋಕಸಭಾ ಸದಸ್ಯನಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದೇನೆ. ಪಕ್ಷ ಸಂಘಟನೆಗೆ ಮುಂದಿನ ದಿನಗಳಲ್ಲಿ ಹೆಚ್ಚು ಒತ್ತು ನೀಡುವುದಾಗಿ ಹೇಳಿದರು.

ಜಿಲ್ಲೆಯಿಂದ ಲೋಕಸಭೆಗೆ ಆಯ್ಕೆಯಾದ ನಂತರ ಪ್ರಾಮಾಣಿಕವಾಗಿ ಲೋಕಸಭೆಯೊಳಗೂ ಹೊರಗೂ ಕೆಲಸ ಮಾಡಿದ್ದೀನಿ, ಎಚ್‍ಎಂಟಿಯಲ್ಲಿ ಇಸ್ರೋ ಸ್ಥಾಪನೆ,ಈಗಾಗಲೇ ಕಾರ್ಯಾರಂಭ ಮಾಡಿದೆ. ಒಂದೇ ಅವಧಿಯಲ್ಲಿ ಇಸ್ರೋ ಸ್ಥಾಪನೆ, ಕಾರ್ಯಾರಂಭ, ಎಚ್‍ಎಎಲ್ ತಯಾರಿಕೆಗೆ ಸಿದ್ಧವಾಗಿದೆ, ಪಾಸ್ಪೋರ್ಟ್ ಸೇವಾ ಕೇಂದ್ರ ಸೇರಿದಂತೆ ಜನರ ನಿರೀಕ್ಷೆಯಂತೆ ಕೆಲಸ ಮಾಡಿರುವುದಾಗಿ ಹೇಳಿದರು.

ಆರೋಗ್ಯ, ಖಾಸಗಿ ಜೀವನ ಬದಿಗಿಟ್ಟು ಕೆಲಸ ಮಾಡಿದ್ದೇನೆ, ಯಾರೆ ಚುನಾಯಿತರಾದರೂ, ಯೋಜನೆಗಳನ್ನು ಪೂರ್ಣಗೊಳಿಸಲು ಸಹಕಾರ ನೀಡುತ್ತೇನೆ. ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ಪ್ರಹಸನ, ನಿರೀಕ್ಷೆ ಮಾಡಿರಲಿಲ್ಲ. ಜನರು ನನಗಾಗಿ ಮಿಡಿದಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪಕ್ಷ ಟಿಕೇಟ್ ನೀಡದೆ ಇದ್ದರೂ ಗೌರವದಿಂದ ನಡೆಸಿಕೊಂಡಿದೆ, ಪಕ್ಷ ಬಿಡುವುದಿಲ್ಲ, ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ. ಕ್ಷೇತ್ರ ವ್ಯಾಪ್ತಿಯನ್ನು ಮೀರಿ ಕೆಲಸ ಮಾಡುತ್ತೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಯಸಂದ್ರ ರವಿಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News