ಶಿವಮೊಗ್ಗ: ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಉಪ ತಹಶೀಲ್ದಾರ್

Update: 2019-05-21 17:29 GMT

ಶಿವಮೊಗ್ಗ, ಮೇ 21: ಆದಾಯ ಪ್ರಮಾಣ ಪತ್ರ ಮಾಡಿಕೊಡಲು ವ್ಯಕ್ತಿಯೋರ್ವರಿಂದ ಕಚೇರಿಯಲ್ಲಿ 8 ಸಾವಿರ ರೂ. ಲಂಚ ಪಡೆಯುತ್ತಿದ್ದ ಉಪ ತಹಶೀಲ್ದಾರ್ ಒಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರ ಸಂಜೆ ಶಿವಮೊಗ್ಗ ನಗರದಲ್ಲಿ ನಡೆದಿದೆ. 

ತಾಲೂಕಿನ ನಿಧಿಗೆ ಹೋಬಳಿಯ ನಾಡ ಕಚೇರಿಯ ಉಪ ತಹಶೀಲ್ದಾರ್ ಪ್ರದೀಪ್ ನಿಕ್ಕಿಂ ಬಂಧಿತ ಉಪ ತಹಶೀಲ್ದಾರ್ ಎಂದು ಗುರುತಿಸಲಾಗಿದೆ. ನಗರದ ಕೋಟೆ ರಸ್ತೆಯ ಜಿಲ್ಲಾ ತರಬೇತಿ ಸಂಸ್ಥೆಯ ಬಳಿಯಿರುವ ನಾಡ ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ಎಸಿಬಿ ಪೊಲೀಸರು ಹಣದ ಸಮೇತ ಉಪ ತಹಶೀಲ್ದಾರನ್ನು ಬಂಧಿಸಿದ್ದಾರೆ. 

ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್‍ಪಿ ವೇಣುಗೋಪಾಲ್, ಇನ್ಸ್ ಪೆಕ್ಟರ್ ವೀರೇಂದ್ರ, ಸಿಬ್ಬಂದಿಗಳಾದ ವಸಂತ, ಲಚ್ಚಾನಾಯ್ಕ್, ರಘುನಾಯ್ಕ್, ನಾಗರಾಜ್, ಹರೀಶ್ ಸೇರಿದಂತೆ ಮೊದಲಾದವರು ಭಾಗಿಯಾಗಿದ್ದರು. 

ಉಪ ತಹಶೀಲ್ದಾರ್ ವಿರುದ್ದ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿತ ಅಧಿಕಾರಿಯನ್ನು ರಾತ್ರಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂಭಾಗ ಹಾಜರುಪಡಿಸಲಾಗುವುದು ಎಂದು ಎಸಿಬಿ ಮೂಲಗಳು ಮಾಹಿತಿ ನೀಡಿವೆ. 

ಡಿಮ್ಯಾಂಡ್: ಭದ್ರಾವತಿಯ ನಿವಾಸಿ ಮನುಸಿಂಗ್‍ರವರು ಶಿವಮೊಗ್ಗದಲ್ಲಿ ನೆಲೆಸಿರುವ ಸಂಬಂಧಿ ಮಹಿಳೆಯೋರ್ವರ ಆದಾಯ ಪ್ರಮಾಣ ಪತ್ರ ಮಾಡಿಸಲು ಮುಂದಾಗಿದ್ದರು. ಈ ಸಂಬಂಧ ಇತ್ತೀಚೆಗೆ ಅವರು ಉಪ ತಹಶೀಲ್ದಾರ್ ಪ್ರದೀಪ್ ನಿಕ್ಕಿಂರನ್ನು ಭೇಟಿಯಾಗಿದ್ದರು. 30 ಸಾವಿರ ಆದಾಯ ಮಿತಿಯೊಳಗಿನ ಪ್ರಮಾಣ ಪತ್ರ ನೀಡಬೇಕಾದರೆ, 15 ಸಾವಿರ ರೂ. ಲಂಚ ನೀಡುವಂತೆ ಉಪ ತಹಶೀಲ್ದಾರ್ ಡಿಮ್ಯಾಂಡ್ ಮಾಡಿದ್ದರು. 

ಈ ಸಂಬಂಧ ಮನುಸಿಂಗ್‍ರವರು ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಮಂಗಳವಾರ ಕೋಟೆ ರಸ್ತೆಯಲ್ಲಿರುವ ನಿಧಿಗೆ ಹೋಬಳಿ ನಾಡ ಕಚೇರಿಯಲ್ಲಿ ಉಪ ತಹಶೀಲ್ದಾರ್ ಪ್ರದೀಪ್ ನಿಕ್ಕಿಂರವರು ಮನಸಿಂಗ್‍ರಿಂದ 8 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ, ಲಂಚದ ಹಣದ ಸಮೇತ ಎಸಿಬಿ ಪೊಲೀಸರು ಅವರನ್ನು ಬಂಧಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News