ಉಪ ಚುನಾವಣೆ: ಗೆದ್ದು ಬೀಗಿದ ಬಿಜೆಪಿ, ಸೋತ ‘ಮೈತ್ರಿ’ಕೂಟ

Update: 2019-05-23 12:22 GMT

ಬೆಂಗಳೂರು, ಮೇ 23: ಎರಡು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಚಿಂಚೋಳಿಯಲ್ಲಿ ಬಿಜೆಪಿಯ ಡಾ.ಅವಿನಾಶ್ ಜಾಧವ್ ಗೆಲುವಿನ ನಗೆ ಬೀರಿದ್ದು, ಕುಂದುಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಗೆಲುವು ಸಾಧಿಸಿದ್ದಾರೆ.

ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿಯ ಅವಿನಾಶ್ ಜಾಧವ್-69,109 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ, ಮೈತ್ರಿ ಅಭ್ಯರ್ಥಿ ಸುಭಾಷ್ ರಾಠೋಡ್ (61,079 ಮತ) ಅವರನ್ನು 8,030 ಮತಗಳ ಭಾರೀ ಅಂತರದಿಂದ ಸೋಲಿಸಿದ್ದಾರೆ.

ಅತ್ತ ಕುಂದಗೋಳ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾವಳಿ ಶಿವಳ್ಳಿ-77,587 ಮತಗಳನ್ನು ಗಳಿಸುವ ಮೂಲಕ ಪ್ರತಿಸ್ಪರ್ಧಿ ಬಿಜೆಪಿಯ ಚಿಕ್ಕನಗೌಡರ ಅವರನ್ನು 1,611 ಮತಗಳ ಅಂತರದಿಂದ ಸೋಲಿಸುವ ಮೂಲಕ ವಿಜಯಮಾಲೆಯನ್ನು ತಮ್ಮ ಕೊರಳಿಗೆ ಧರಿಸಿ ವಿಧಾನಸಭೆ ಪ್ರವೇಶಿಸಲಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಹಾಗೂ ವಿಪಕ್ಷ ಬಿಜೆಪಿಯ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿದ್ದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಮೈತ್ರಿ ಸರಕಾರಕ್ಕೆ ಬಿಜೆಪಿ ಸೋಲಿನ ರುಚಿಯನ್ನುಣಿಸಿದೆ. ಮೈತ್ರಿ ಪಾಲುದಾರ ಪಕ್ಷ ಕಾಂಗ್ರೆಸ್ ತನ್ನದೆ ಕ್ಷೇತ್ರವಾದ ಚಿಂಚೋಳಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ.

ಸ್ಥಳೀಯ ಮುಖಂಡರ ವಿರೋಧದ ನಡುವೆ ಕೊನೆಯ ಕ್ಷಣದಲ್ಲಿ ಕುಂದಗೋಳ ವಿಧಾನಸಭಾ ಕ್ಷೇತ್ರವನ್ನು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹೆಗಲಿಗೆ ವಹಿಸಿದ್ದು ಮತ್ತು ಅವರ ರೂಪಿಸಿದ ರಣತಂತ್ರದ ಪರಿಣಾಮ ಕುಸುಮಾವತಿ ಶಿವಳ್ಳಿ ಜಯದ ನಗೆ ಬೀರಿದ್ದಾರೆ.

ಬಲ ಹೆಚ್ಚಿಸಿಕೊಂಡ ಬಿಜೆಪಿ: ವಿಧಾನಸಭೆಯಲ್ಲಿ 104 ಸಂಖ್ಯಾಬಲವನ್ನು ಹೊಂದಿದ್ದ ವಿಪಕ್ಷ ಬಿಜೆಪಿ ಉಪ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆಲ್ಲುವ ಮೂಲಕ ತನ್ನ ಸಂಖ್ಯಾಬಲವನ್ನು 105ಕ್ಕೆ ಹೆಚ್ಚಿಸಿಕೊಂಡಿದೆ. ಹೀಗಾಗಿ ಆಡಳಿತಾರೂಢ ಮೈತ್ರಿ ಸರಕಾರಕ್ಕೆ ‘ಆಪರೇಷನ್ ಕಮಲ’ ಭೀತಿಯಲ್ಲೆ ಮುನ್ನಡೆಯಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News