ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕದ ಮೂವರು ನ್ಯಾಯಮೂರ್ತಿಗಳು

Update: 2019-05-23 18:33 GMT

ಬೆಂಗಳೂರು, ಮೇ 23: ಕರ್ನಾಟಕ ಮೂಲದ ಹಾಲಿ ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರು ಸುಪ್ರೀಂಕೋರ್ಟ್‌ಗೆ ಪದೋನ್ನತಿ ಪಡೆಯುವ ಮೂಲಕ 30 ವರ್ಷಗಳ ನಂತರ ರಾಜ್ಯದ ಮೂವರು ನ್ಯಾಯಮೂರ್ತಿಗಳು ಏಕಕಾಲದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಪರೂಪದ ದಾಖಲೆ ನಿರ್ಮಾಣವಾಗಿದೆ.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಮೋಹನ ಶಾಂತನಗೌಡರ್ ಮತ್ತು ಎಸ್.ಅಬ್ದುಲ್ ನಜೀರ್ ಅವರು ಈಗಾಗಲೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಪದೋನ್ನತಿ ಪಡೆದಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಮೂವರು ನ್ಯಾಯಮೂರ್ತಿಗಳು ಏಕಕಾಲದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಸೇವೆ ಸಲ್ಲಿಸುವಂತೆ ಆಗಿದೆ.

ಒಂದೇ ರಾಜ್ಯದ ಓರ್ವ ಅಥವಾ ಇಬ್ಬರು ನ್ಯಾಯಮೂರ್ತಿಗಳು ಏಕಕಾಲದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುವ ಸನ್ನಿವೇಶ ಸಾಮಾನ್ಯವಾಗಿ ಕಂಡು ಬರುತ್ತದೆ. ಕೆಲವು ಸಂದರ್ಭದಲ್ಲಿ ರಾಜ್ಯದ ಒಬ್ಬ ನ್ಯಾಯಮೂರ್ತಿ ಸಹ ಸುಪ್ರೀಂಕೋರ್ಟ್‌ನಲ್ಲಿ ಇರದ ಪರಿಸ್ಥಿತಿಯೂ ಇದೆ. ಆದರೆ, ಒಂದೇ ರಾಜ್ಯದ ಮೂವರು ನ್ಯಾಯಮೂರ್ತಿಗಳು ಏಕಕಾಲದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಸೇವೆ ಸಲ್ಲಿಸುವುದು ಅಪರೂಪ. ಅಂತಹ ಅಪರೂಪದ ಬೆಳವಣಿಗೆಗೆ ಕರ್ನಾಟಕ ಎರಡನೆ ಬಾರಿಗೆ ಸಾಕ್ಷಿಯಾಗಿದೆ.

ನ್ಯಾ.ಬೋಪಣ್ಣ ಅವರಿಂದಾಗಿ ಈವರೆಗೆ 14 ಮಂದಿ ಕರ್ನಾಟಕದ ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್‌ಗೆ ನೇಮಕಗೊಂಡಂತಾಗಿದೆ. ಅದರಲ್ಲಿ ನಾಲ್ವರು ಮುಖ್ಯ ನ್ಯಾಯಮೂರ್ತಿಗಳಾಗಿ ನಿವೃತ್ತಿ ಹೊಂದಿದ್ದಾರೆ. ಮೂವರು ನ್ಯಾಯಮೂರ್ತಿಗಳು ಏಕಕಾಲದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸಿದ ಸನ್ನಿವೇಶವು 1987 ರಿಂದ 1989 ನಡುವೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News