ಕೊಳಗೆರೆಯಲ್ಲಿ ಸುಮಲತಾ ಬೆಂಬಲಿಗರು-ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ: ಇಬ್ಬರಿಗೆ ಗಾಯ

Update: 2019-05-24 04:53 GMT

ಮದ್ದೂರು, ಮೇ 24: ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆದ್ದ ಹಿನ್ನೆಲೆಯಲ್ಲಿ ಹಾಗೂ ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ಕೂಳಗೆರೆ ಗ್ರಾಮದಲ್ಲಿ ಗುರುವಾರ ನಡೆದಿದೆ.

ಕೂಳಗೆರೆ ಗ್ರಾಮ ನಿವಾಸಿ ಬಸ್ ನಿರ್ವಾಹಕ ಕುಮಾರ್ ಹಾಗೂ ಅರೆತಿಪ್ಪೂರು ಗ್ರಾಮದ ನಿವಾಸಿ ವಿ.ಶಶಿಧರ್ ಹಲ್ಲೆಗೊಳಗಾದವರು. ಗಾಯಗೊಂಡಿರುವ ಅವರು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ:  ಕೂಳಗೆರೆ ಗೇಟ್ ಬಳಿ ಕಾಂಗ್ರೆಸ್ ಮುಖಂಡ ಯೋಗಾನಂದ ಎಂಬವರು ಕುಳಿತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಜೆಡಿಎಸ್ ಮುಖಂಡರಾದ ಅಭಿಷೇಕ್, ಅರುಣ್, ನವೀನ್, ಕುಲದೀಪ, ಪ್ರದೀಪ್ ಹಾಗೂ ಹೊನ್ನಪ್ಪಎಂಬವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಸುಮಲತಾ ಅವರನ್ನು ಗೆಲ್ಲಿಸಿದ್ದೀರಿ, ಮರಳುಗಾರಿಕೆ ನೀವು ನಿಲ್ಲಿಸ್ತೀರಾ ಎಂದು ತಂಡವು ಯೋಗಾನಂದರನ್ನು ಮಾತಿಗೆಳೆದಾಗ ಹೇಳಿದಾಗ ಜಗಳ ಸಂಭವಿಸಿದೆ. ಈ ಸಂದರ್ಭ ಮಧ್ಯಪ್ರವೇಶ ಮಾಡಿದ ಕುಮಾರ್ ಮೇಲೆ ಬಿಯರ್ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ. ಇದರಿಂದ ಕುಮಾರ್ ತಲೆಗೆ ಮತ್ತು ಮುಖಕ್ಕೆ ಗಾಯವಾಗಿದೆ.

ಸ್ವಲ್ಪ ಸಮಯದ ನಂತರ ಅರೆತಿಪ್ಪೂರು ಗ್ರಾಮದ ಶಶಿಧರ್ ಅವರಿಗೆ ಪ್ರದೀಪ್, ಅರುಣ್ ಹಾಗೂ ಕುಲದೀಪ್ ‘ಚುನಾವಣೆಯಲ್ಲಿ ಸುಮಲತಾ ಪರವಾಗಿ ಕೆಲಸ ಮಾಡಿದ್ದೀಯಾ’ ಎಂದು ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಕೂಳಗೆರೆ ಗ್ರಾಮದ ಯೋಗಾನಂದ ಅವರ ಮನೆ ಮೇಲೆ ಕಲ್ಲು ತೂರಾಟ ಮಾಡಿ, ಬೈಕ್‌ಜಖಂಗೊಳಿಸಲಾಗಿದೆ ಹಾಗೂ ಅವ್ಯಾಚ ಪದಗಳಿಂದ ನಿಂದಿಸಲಾಗಿದೆ ಎಂದು ದೂರಲಾಗಿದೆ.

ಘಟನೆ ಹಿನ್ನೆಲೆಯಲ್ಲಿ ಕೂಳಗೆರೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News