ಪಾಕ್ ಪ್ರಧಾನಿಗೆ ಮೋದಿ ಸಂದೇಶ ಏನು?

Update: 2019-05-27 03:51 GMT

ಹೊಸದಿಲ್ಲಿ, ಮೇ 27: ವಿಶ್ವಾಸ ಮೂಡಿಸುವುದು ಹಾಗೂ ಹಿಂಸಾಚಾರ ಮತ್ತು ಭಯೋತ್ಪಾದನೆ ಮುಕ್ತ ವಾತಾವರಣ ಸೃಷ್ಟಿ ನಮ್ಮ ಪ್ರದೇಶದಲ್ಲಿ ಶಾಂತಿ, ಪ್ರಗತಿ ಹಾಗೂ ಸಮೃದ್ಧಿ ಸಾಧಿಸಲು ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸಂದೇಶ ರವಾನಿಸಿದ್ದಾರೆ.

ಬಾಲಾಕೋಟ್‌ನಲ್ಲಿ ಜೆಇಎಂ ಉಗ್ರ ಶಿಬಿರಗಳ ಮೇಲೆ ವಾಯುದಾಳಿ ಬಳಿಕ ಇದೇ ಮೊದಲ ಬಾರಿಗೆ ಉಭಯ ದೇಶಗಳ ಪ್ರಧಾನಿಗಳ ನಡುವೆ ಸಂವಾದ ಏರ್ಪಟ್ಟಿದೆ. ದಾಳಿ ಬಳಿಕ ನಡೆದ ಏಳು ಹಂತಗಳ ಸುದೀರ್ಘ ಚುನಾವಣೆ ವೇಳೆ ಕೂಡಾ ಈ ದಾಳಿ ಬಿಜೆಪಿಗೆ ಪ್ರಮುಖ ಚುನಾವಣಾ ವಿಷಯವಾಗಿತ್ತು. ಭಯೋತ್ಪಾದನೆ ವಿರುದ್ಧ ತಮ್ಮ ಪಕ್ಷ ಕಠಿಣ ನಿಲುವು ತೆಗೆದುಕೊಂಡಿದೆ ಎಂದು ಬಿಜೆಪಿ ಬಿಂಬಿಸಿಕೊಂಡಿತ್ತು.

ರವಿವಾರ ಇಮ್ರಾನ್‌ ಖಾನ್ ದೂರವಾಣಿ ಕರೆ ಮಾಡಿ ಎರಡನೇ ಅವಧಿಗೆ ಪ್ರಧಾನಿಯಾದ ಮೋದಿಯನ್ನು ಅಭಿನಂದಿಸಿದರು. ಆದರೆ ಎರಡೂ ನೆರೆಯ ದೇಶಗಳು ಈ ಸಂವಾದದ ಬಗ್ಗೆ ಭಿನ್ನ ಹೇಳಿಕೆ ನೀಡಿರುವುದು ಉಭಯ ದೇಶಗಳ ನಡುವೆ ಇರುವ ಕಂದಕವನ್ನು ಸ್ಪಷ್ಟವಾಗಿ ಬಿಂಬಿಸಿದೆ.

ಉಭಯ ದೇಶಗಳ ನಡುವೆ ಶಾಂತಿ ಮಾತುಕತೆ ಆರಂಭವಾಗಬೇಕಿದ್ದರೆ, ಭಯೋತ್ಪಾದನೆ ಮತ್ತು ಹಿಂಸೆ ನಿಲ್ಲಿಸುವುದು ಅಗತ್ಯ ಎಂದು ಭಾರತ ಸ್ಪಷ್ಟಪಡಿಸಿದೆ. ಆದರೆ ಪಾಕಿಸ್ತಾನ ವಿದೇಶಾಂಗ ಕಚೇರಿ ಭಿನ್ನ ಹೇಳಿಕೆ ನೀಡಿದೆ. "ದಕ್ಷಿಣ ಏಷ್ಯಾದಲ್ಲಿ ಶಾಂತಿ, ಪ್ರಗತಿ ಹಾಗೂ ಸಮೃದ್ಧಿಯ ಬಗೆಗೆ ತಮ್ಮ ನಿಲುವನ್ನು ಇಮ್ರಾನ್‌ ಖಾನ್ ಸ್ಪಷ್ಟಪಡಿಸಿದ್ದು, ಈ ಗುರಿ ತಲುಪುವ ನಿಟ್ಟಿನಲ್ಲಿ ಮೋದಿ ಜತೆ ಸಹಕರಿಸುವುದಾಗಿ ಪ್ರಧಾನಿ ಸ್ಪಷ್ಟಪಡಿಸಿದ್ದಾರೆ" ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News