ಪ್ರತಿರೋಧದ ಧ್ವನಿ ಉಡುಗದಿರಲಿ

Update: 2019-05-28 05:11 GMT

ಲೋಕಸಭಾ ಚುನಾವಣೆಯಲ್ಲಿ ದೈತ್ಯ ಬಹುಮತದೊಂದಿಗೆ ಜಯಶಾಲಿಯಾದ ನಂತರ ದೇಶದಲ್ಲಿ ನಡೆದಿರುವ ಕೆಲ ವಿದ್ಯಮಾನಗಳು ಆತಂಕಕಾರಿಯಾಗಿವೆ. ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರಲ್ಲಿ ಭೀತಿಯ ಭಾವನೆ ಮೂಡಿದೆ. ಈ ವಂಚಿತ ಸಮುದಾಯಗಳ ಮೇಲೆ ಅಲ್ಲಲ್ಲಿ ಹಲ್ಲೆ, ಹಿಂಸಾಚಾರಗಳು ನಡೆದಿವೆ. ಬಿಹಾರದ ಬೆಗುಸರಾಯ್‌ನಲ್ಲಿ ಕನ್ಹಯ್ಯಾಕುಮಾರ್‌ರಿಗೆ ಬೆಂಬಲ ನೀಡಿದ ಕಮ್ಯುನಿಸ್ಟ್ ಕಾರ್ಯಕರ್ತನೊಬ್ಬನನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ದನದ ಮಾಂಸ ಸಾಗಾಟ ಮಾಡುತ್ತಿದ್ದರೆಂದು ಕೆಲವೆಡೆ ಹಲ್ಲೆಗಳು ನಡೆದಿವೆ. ಮಲ್ಲಿಕಾರ್ಜುನ ಖರ್ಗೆಯವರ ಸೋಲಿನ ನಂತರ ಕಲಬುರಗಿ ಜಿಲ್ಲೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆದ ಘಟನೆಗಳು ವರದಿಯಾಗಿವೆ. ಯಡ್ರಾಮಿ ತಾಲೂಕಿನ ನಾಗರಹಳ್ಳಿಯಲ್ಲಿ ಮದುವೆ ಮೆರವಣಿಗೆ ಮಾಡಲು ಹೊರಟಿದ್ದ ದಲಿತರ ಮೇಲೆ ಕಲ್ಲು ತೂರಾಟದ ಘಟನೆ ವರದಿಯಾಗಿದೆ. ಉತ್ತರ ಭಾರತದ ಅನೇಕ ಕಡೆಗಳಿಂದ ಇಂತಹ ಹಿಂಸಾಚಾರದ ವರದಿಗಳು ಬರುತ್ತಲೇ ಇವೆ. ಅಲ್ಪಸಂಖ್ಯಾತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಮಾತು ಬರೀ ತುಟಿ ಸೇವೆಯಾಗಿದೆ. ಲೋಕಸಭಾ ಚುನಾವಣೆ ಫಲಿತಾಂಶ ದೇಶದ ದಮನಿತ, ಅಲ್ಪಸಂಖ್ಯಾತ ವರ್ಗಗಳ ಮೇಲೆ ದಾಳಿ ನಡೆಸಲು ಸಿಕ್ಕ ಜನಾದೇಶ ಎಂಬಂತೆ ಮೇಲ್ವರ್ಗಗಳು, ಪಟ್ಟ ಭದ್ರ ಹಿತಾಸಕ್ತಿಗಳು ವರ್ತಿಸುತ್ತಿವೆ.

 ಇಂತಹ ದೌರ್ಜನ್ಯಗಳನ್ನು ಪ್ರತಿಭಟಿಸಬೇಕಾದ ಧ್ವನಿಗಳು ಚುನಾವಣಾ ಫಲಿತಾಂಶದ ನಂತರ ಉಡುಗಿ ಹೋದಂತೆ ಕಾಣುತ್ತಿದೆ. ಇದನ್ನೆಲ್ಲ ತಕ್ಷಣ ಪ್ರತಿಭಟಿಸಬೇಕಾದ ಪ್ರತಿ ಪಕ್ಷಗಳು ಚುನಾವಣಾ ಸೋಲಿನ ಆಘಾತದಿಂದ ಚೇತರಿಸಿಕೊಂಡಂತೆ ಕಾಣುತ್ತಿಲ್ಲ. ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲೂ ನಿರುತ್ಸಾಹ ಎದ್ದು ಕಾಣುತ್ತಿದೆ. ಪ್ರಜಾಪ್ರಭುತ್ವದಲ್ಲಿ ಸೋಲು, ಗೆಲುವು ಸಾಮಾನ್ಯ ಸಂಗತಿ, ಗೆದ್ದಿರುವ ಪಕ್ಷದಲ್ಲಿ ಸಹಜವಾಗಿ ಸಂಭ್ರಮ ಎದ್ದು ಕಾಣುತ್ತಿದೆ. ಆದರೆ ಸಂಭ್ರಮದ ಜೊತೆಗೆ ಇರಬೇಕಾದ ವಿನಯ, ಸೌಜನ್ಯ ಎದ್ದು ಕಾಣುತ್ತಿಲ್ಲ. ಈ ಸೋಲಿನ ನಂತರ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಲ್ಲಿ ನಿರುತ್ಸಾಹದ ಬದಲಾಗಿ ಆತ್ಮಾವಲೋಕನ ಮನೋಭಾವ ಮೂಡಬೇಕಾಗಿದೆ. ಆದರೆ ಪರಾಮರ್ಶೆಗಿಂತ ಎಲ್ಲ ಮುಗಿದೇ ಹೋಯಿತೇನೊ ಎಂಬ ಭಾವನೆ ಎದ್ದು ಕಾಣುತ್ತಿದೆ. ಈ ಚುನಾವಣೆಯಲ್ಲಿ ಜಯಶಾಲಿಯಾದ ಬಿಜೆಪಿಯ ಅಧಿಕಾರಾವಧಿ ಕೇವಲ ಐದು ವರ್ಷಗಳು ಮಾತ್ರ. ಪ್ರತಿಪಕ್ಷಗಳು ತಮ್ಮ ಲೋಪಗಳನ್ನು ಸರಿಪಡಿಸಿಕೊಂಡು ಪಕ್ಷದ ಸಂಘಟನೆಯನ್ನು ಚುರುಕುಗೊಳಿಸಿದರೆ ಮುಂದಿನ ಬಾರಿ ಮತ್ತೆ ಗೆಲುವಿನ ಮಾಲೆ ಕೊರಳಿಗೆ ಬೀಳಬಹುದು. ಎಲ್ಲ ಮುಗಿದೇ ಹೋಗಿದೆ ಎಂದು ಮೂಲೆ ಗುಂಪಾಗಬಾರದು. ಈ ಮೋದಿ ಬಿರುಗಾಳಿಯಲ್ಲೂ ತಮಿಳುನಾಡಿನ ಡಿಎಂಕೆ ಪಕ್ಷ ಹೇಗೆ ಮೈ ಕೊಡವಿ ನಿಂತಿತೆಂಬುದು ಕಾಂಗ್ರೆಸ್ ಸೇರಿದಂತೆ ಉಳಿದ ಪ್ರತಿಪಕ್ಷಗಳಿಗೆ ಮಾದರಿಯಾಗಬೇಕು.

ಶತಮಾನದ ಇತಿಹಾಸ ಹೊಂದಿರುವ ದೇಶದ ಮುಖ್ಯ ವಿರೋಧ ಪಕ್ಷವಾದ ಕಾಂಗ್ರೆಸ್‌ನ ಸಮಸ್ಯೆ ಏನೆಂದರೆ ಸೋಮಾರಿತನ. ಚುನಾವಣೆ ಬಂದಾಗ ಮಾತ್ರ ನಿದ್ದೆಯಿಂದ ಎದ್ದೇಳುವ ಕಾಂಗ್ರೆಸ್ ಪಕ್ಷ ಎಲ್ಲದಕ್ಕೂ ಅವಲಂಬಿಸಿರುವುದು ನೆಹರೂ ಕುಟುಂಬವನ್ನು. ಹೀಗೆ ಒಂದು ಕುಟುಂಬವನ್ನು ಅವಲಂಬಿಸಿ ಇಂದಿನ ದಿನಗಳಲ್ಲಿ ಪಕ್ಷವನ್ನು ಉಳಿಸಿ ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ನೆಹರೂ ಕುಟುಂಬದ ಇಬ್ಬರು ನಾಯಕರು ಪಕ್ಷಕ್ಕಾಗಿ, ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಹತ್ಯೆಯನ್ನು ಮರೆಯಲು ಸಾಧ್ಯವಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಮುಂಚಿನಂತೆ ನೆಹರೂ ಕುಟುಂಬದ ಪ್ರಭಾವ ಉಳಿದಿಲ್ಲ. ಸಂಘ ಪರಿವಾರ ಈ ಕುಟುಂಬದ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ತೇಜೋವಧೆ ಮಾಡಿ, ದೇಶಕ್ಕಾಗಿ ದುಡಿದವರನ್ನು, ಮಡಿದವರನ್ನು ಖಳನಾಯಕರಂತೆ ಬಿಂಬಿಸಿ ಪ್ರಚಾರ ಮಾಡಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸರಿಯಾದ ಉತ್ತರ ನೀಡಲಿಲ್ಲ. ಕಳೆದ ಅರವತ್ತು ವರ್ಷಗಳಲ್ಲಿ ಆಳಿದವರು ದೇಶವನ್ನು ಲೂಟಿ ಮಾಡಿದರು ಎಂಬ ಸಂಘಿಗಳ ಗೊಬೆಲ್ಸ್ ಪ್ರಚಾರ ಯುವಕರನ್ನು ಆಕರ್ಷಿಸಿತು. ಇದಕ್ಕೆ ಪ್ರತಿಯಾಗಿ ಹೇಳಲು ಕಾಂಗ್ರೆಸ್‌ಗೆ ಬೇಕಾದಷ್ಟು ವಿಷಯಗಳಿದ್ದವು. ಸ್ವಾತಂತ್ರಾನಂತರ ಅನೇಕ ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಕಾಲದಲ್ಲೇ ಪಂಚವಾರ್ಷಿಕ ಯೋಜನೆಗಳು ರೂಪುಗೊಂಡು ಆಧುನಿಕ ಭಾರತ ನಿರ್ಮಾಣವಾಯಿತು. ಸಾರ್ವಜನಿಕ ಉದ್ಯಮ ರಂಗ, ಬಾಹ್ಯಾಕಾಶ ಸಂಶೋಧನೆ, ಸೇನಾ ಸ್ವಾವಲಂಬನೆ, ಶೈಕ್ಷಣಿಕ ರಂಗದ ಸಾಧನೆಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಜನರ ಮನೆ ಬಾಗಿಲಿಗೆ ಹೋಗಿ ವಿವರಿಸಿದ್ದರೆ ಫಲಿತಾಂಶ ಈ ರೀತಿ ಬರುತ್ತಿರಲಿಲ್ಲ.

ಆದರೆ ಕಾಂಗ್ರೆಸ್‌ನಲ್ಲಿ ಸಂಘಟನಾ ಜಾಲ ದೇಶವ್ಯಾಪಿಯಾಗಿದ್ದರೂ ಅದನ್ನು ಬಳಸಿಕೊಂಡು ಜಾತ್ಯತೀತ ತತ್ವಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಲಿಲ್ಲ. ಕಾಂಗ್ರೆಸ್ ಕೇಡರ್ ಬೇಸ್ ಪಾರ್ಟಿಯಾಗಿ ಉಳಿದಿಲ್ಲ. ಅಧಿಕಾರದ ಸವಿಯುಣ್ಣಲು ಬಂದ ರಿಯಲ್ ಎಸ್ಟೇಟ್ ಮಾಫಿಯಾಗಳು, ಗುತ್ತಿಗೆದಾರರು, ಉದ್ಯಮಪತಿಗಳು ಅದರಲ್ಲಿ ತುಂಬಿದ್ದಾರೆ.ಅವರಾರಿಗೂ ತಮ್ಮ ಲಾಭಕೋರತನ ಬಿಟ್ಟು ಪಕ್ಷಕ್ಕಾಗಿ ದುಡಿಯುವ ಆಸಕ್ತಿಯಿಲ್ಲ. ಈಗ ಕಾಂಗ್ರೆಸ್ ಉಳಿಯಬೇಕಾದರೆ ಹೊಸ ರಕ್ತದ ಯುವಕರು ಬರಬೇಕು, ಹೊಸ ಚಿಂತನೆಯನ್ನು ಮೈ ಗೂಡಿಸಿಕೊಳ್ಳಬೇಕು. ಆಗ ಮಾತ್ರ ಪಕ್ಷ ಪುನಶ್ಚೇತನ ಪಡೆಯಲು ಸಾಧ್ಯ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಬ್ರಿಟಿಷರ ಚೇಲಾಗಿರಿ ಮಾಡಿದ ಕೋಮುವಾದಿ ಸಂಘಟನೆ ಸುಳ್ಳು ಹೇಳಿ ಈ ಪರಿ ಬೆಳೆದು ಅಧಿಕಾರಕ್ಕೆ ಬರುವುದಾದರೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭವ್ಯ ಇತಿಹಾಸ ಹೊಂದಿದ ಕಾಂಗ್ರೆಸ್ ಪಕ್ಷಕ್ಕೆ ಈ ದಯನೀಯ ಸ್ಥಿತಿ ಏಕೆ? ಈ ಬಗ್ಗೆ ಆ ಪಕ್ಷ ಪರಾಮರ್ಶೆ ನಡೆಸಬೇಕಾಗಿದೆ.

ಎಡಪಂಥೀಯ ಪಕ್ಷಗಳು ಸೇರಿದಂತೆ ಉಳಿದ ಪ್ರತಿಪಕ್ಷಗಳು ಕೂಡ ಈಗ ಸೋಲಿನಿಂದ ನಿರಾಸೆಗೊಳ್ಳಬಾರದು, ದೇಶದ ಬಹುಸಂಖ್ಯಾತ ದಲಿತರು, ಆದಿವಾಸಿಗಳು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ನೋವು ಸಂಕಷ್ಟಗಳಿಗೆ ಸ್ಪಂದಿಸಬೇಕು. ದೇಶದ ಅಧಿಕಾರ ಸೂತ್ರ ಹಿಡಿದಿರುವ ಫ್ಯಾಶಿಸ್ಟ್ ಶಕ್ತಿಗಳಿಂದ ಈ ವಂಚಿತ ಸಮುದಾಯಗಳು ತೊಂದರೆಗೊಳಗಾಗಿವೆ. ಆ ಜನರಲ್ಲಿ ಭರವಸೆ ತುಂಬಿ, ಆಳುವ ವರ್ಗದ ದೌರ್ಜನ್ಯದ ವಿರುದ್ಧ ಸ್ವಯಂರಕ್ಷಣೆಗಾಗಿ ಹೋರಾಟದ ಕಣಕ್ಕೆ ಇಳಿಸಬೇಕು. ಇಂಥ ಜನ ಹೋರಾಟಗಳೇ ಪ್ರತಿಪಕ್ಷಗಳಿಗೆ ಪುನಶ್ಚೇತನ ನೀಡಲು ಸಾಧ್ಯ.

ಈ ಚುನಾವಣಾ ಸೋಲು ಶಾಶ್ವತವಲ್ಲ. 1984ರಲ್ಲಿ ಲೋಕಸಭೆಯಲ್ಲಿ ಕೇವಲ ಇಬ್ಬರು ಸದಸ್ಯರನ್ನು ಹೊಂದಿದ್ದ ಬಿಜೆಪಿ ಅಡ್ವಾಣಿ ರಥಯಾತ್ರೆ ನಂತರ ನಡೆದ ಚುನಾವಣೆಯಲ್ಲಿ ಒಮ್ಮೆಲೇ ಎಂಬತ್ತು ಸ್ಥಾನಗಳನ್ನು ಗೆದ್ದುಕೊಂಡಿತು. ಆನಂತರ ಮತ್ತೆ ಸೋತಿದೆ. ಜನತಂತ್ರದಲ್ಲಿ ಈ ಸೋಲು ಗೆಲುವು ಸಾಮಾನ್ಯ. ಆದರೆ ಈ ಬಾರಿ ಮೋದಿ ನೇತೃತ್ವದ ಬಿಜೆಪಿಯ ಗೆಲುವು ಸಾಮಾನ್ಯ ಸಂಗತಿಯಲ್ಲ. ''ಈ ಸಲ ಗೆದ್ದರೆ ಮುಂದಿನ ಬಾರಿ 2024ರಲ್ಲಿ ಚುನಾವಣೆಯನ್ನೇ ನಡೆಸುವುದಿಲ್ಲ'' ಎಂಬ ಸಾಕ್ಷಿ ಮಹಾರಾಜ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಆಡಿದ ಮಾತನ್ನು ಲಘುವಾದ ಹೇಳಿಕೆ ಎಂದು ತಳ್ಳಿ ಹಾಕಲು ಸಾಧ್ಯವಿಲ್ಲ. ಸಾವರ್ಕರ್ ಮತ್ತು ಗೋಳ್ವಾಲ್ಕರ್‌ರ ಹಿಂದೂ ರಾಷ್ಟ್ರದ ಗುರಿ ಸಾಧನೆಗೆ ಅಡ್ಡಿಯಾಗಿರುವ ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಯತ್ನ ಗಳು ನಡೆಯಬಹುದು. ಕಳೆದ ಐದು ವರ್ಷಗಳ ಮೋದಿ ಆಡಳಿತದ ಕಾಲಾವಧಿಯಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ಸಾಕಷ್ಟು ದುರ್ಬಲಗೊಳಿಸಲಾಗಿದೆ. ಇಂತಹ ಆತಂಕದ ಪರಿಸ್ಥಿತಿಯಲ್ಲಿ ಪ್ರತಿಪಕ್ಷಗಳು ಎಚ್ಚರವಾಗಿರಬೇಕು.

ಮುಂದಿನ ಐದು ವರ್ಷಗಳ ಕಾಲಾವಧಿಯಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಹಕ್ಕುಗಳ ರಕ್ಷಣೆಗಾಗಿ ಪ್ರತಿಪಕ್ಷಗಳು ಅದರಲ್ಲೂ ಎಡ ಪುರೋಗಾಮಿ ಪಕ್ಷಗಳು ಒಕ್ಕೊರಲಿನಿಂದ ದನಿಯೆತ್ತಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ಸುರಕ್ಷಿತವಾಗಿ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News