19 ವರ್ಷಗಳಿಂದ ಇಫ್ತಾರ್ ಕೂಟ ಆಯೋಜಿಸುತ್ತಿರುವ ತುಮಕೂರಿನ ಹಿಂದೂ ಕುಟುಂಬ

Update: 2019-05-28 12:25 GMT

ತುಮಕೂರು, ಮೇ 28: ಪವಿತ್ರ ರಮಝಾನ್ ಅಂಗವಾಗಿ ಉಪವಾಸ ನಿರತವಾಗಿರುವ ಮುಸ್ಲಿಂ ಸಹೋದರರೊಂದಿಗೆ ಭಾವೈಕ್ಯತೆ ಸಾರುವ ನಿಟ್ಟಿನಲ್ಲಿ ತುಮಕೂರಿನಲ್ಲಿ ಕಳೆದ 19 ವರ್ಷಗಳಿಂದ ಹಿಂದೂ ಕುಟುಂಬವೊಂದು ಇಫ್ತಾರ್ ಕೂಟವನ್ನು ಆಯೋಜಿಸುತ್ತಿದೆ.

ನಗರದ ಮಂಡಿಪೇಟೆಯಲ್ಲಿರುವ ಅಕ್ಷಯ ಮೋಟಾರ್ಸ್ ಏಜೆನ್ಸಿಯ ಮಾಲಕ ಬಿ.ವಿ.ವೆಂಕಟೇಶ್ ಲಾಡ್ ಹಾಗೂ ಬಿ.ವಿ.ರಂಗನಾಥ ಲಾಡ್ ಅವರ ಕುಟುಂಬ ಪ್ರತಿ ವರ್ಷ ಮುಸ್ಲಿಮರಿಗಾಗಿ ಇಫ್ತಾರ್ ಕೂಟವನ್ನು ತಮ್ಮದೇ ಏಜೆನ್ಸಿಯಲ್ಲಿ ಆಯೋಜಿಸಿ, ಅವರೊಂದಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ, ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಸಾಮೂಹಿಕ ಭೋಜನವನ್ನು ಮಾಡುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.

'ಭಾವೈಕ್ಯತೆಯನ್ನು ಸಾರುವುದಕ್ಕಾಗಿ ನಮ್ಮ ಕುಟುಂಬ ಈ ಇಫ್ತಾರ್ ‍ಕೂಟವನ್ನು ಆಯೋಜಿಸುತ್ತಾ ಬರುತ್ತಿದ್ದು, ಪ್ರಾರ್ಥನೆ ಸಲ್ಲಿಸುವ ಮೂಲಕ ದೇಶದ ರಕ್ಷಣೆ ಹಾಗೂ ಭ್ರಾತೃತ್ವವನ್ನು ಗಟ್ಟಿಗೊಳಿಸುವಂತೆ ಕೋರಲಾಗುತ್ತಿದೆ. ಇದರಿಂದಾಗಿ ನಮ್ಮ ನಡುವೆ ಉತ್ತಮ ಭಾಂದವ್ಯ ವೃದ್ಧಿಯಾಗಲಿದ್ದು, ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಂತೆ ನಮ್ಮ ಮಕ್ಕಳಿಗೂ ತಿಳಿಸಿದ್ದೇವೆ ಎನ್ನುತ್ತಾರೆ ಅಕ್ಷಯ ಮೋಟಾರ್ಸ್ ಏಜೆನ್ಸಿ ಮಾಲಕ ವೆಂಕಟೇಶ್ ಲಾಡ್.

ಈ ಇಫ್ತಾರ್ ಕೂಟದಲ್ಲಿ ಮಂಡಿಪೇಟೆ ಸುತ್ತಮುತ್ತಲಿರುವ ಮುಸ್ಲಿಮರು ಹಾಗೂ ಅಕ್ಷಯ ಮೋಟಾರ್ಸ್‍ನಲ್ಲಿ ಕಾರ್ಯನಿರ್ವಹಿಸುವ ನೌಕರರು ಪಾಲ್ಗೊಳ್ಳುತ್ತಾರೆ. ಅವರಿಗಾಗಿಯೇ ವಿಶೇಷ ಉಪಹಾರಗಳನ್ನು ಆಯೋಜಿಸಲಾಗುತ್ತದೆ. ಉಪವಾಸ ನಿರತ ಮುಸ್ಲಿಮರು ಇಲ್ಲಿಯೇ ಪ್ರಾರ್ಥನೆ ಸಲ್ಲಿಸುವ ಮೂಲಕ ಉಪವಾಸವನ್ನು ತೊರೆಯುತ್ತಾರೆ. 

ಅಶ್ವಾಕ್‍ ಅಹ್ಮದ್, ದಸ್ತಗೀರ್ ಸಾಬ್, ನಯಾಜ್ ಅಹಮದ್, ಹೇಮಂತ್‍ಕುಮಾರ್ ಲಾಡ್, ವಿನಯ್‍ಲಾಡ್, ಮುನ್ನಾ ಸೇರಿದಂತೆ ಅನೇಕರು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News