ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಬುಧವಾರ ಮತದಾನ

Update: 2019-05-28 12:45 GMT

► 4360 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಬೆಂಗಳೂರು, ಮೇ 28: ಲೋಕಸಭಾ ಚುನಾವಣೆಯ ಪ್ರಕ್ರಿಯೆ ಮುಗಿದಿದ್ದು, ರಾಜ್ಯದ 63 ನಗರ ಸ್ಥಳೀಯ ಸಂಸ್ಥೆಗಳಿಗೆ ನಾಳೆ(ಮೇ 29) ಮತದಾನ ನಡೆಯಲಿದ್ದು, ರಾಜ್ಯ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

ಮೊದಲ ಹಂತದಲ್ಲಿ ಚುನಾವಣೆ ಮುಗಿದಿದ್ದು, ಎರಡನೆ ಹಂತದಲ್ಲಿ ಮಾರ್ಚ್ 2019 ರಿಂದ ಜುಲೈ 2019ರ ಅವಧಿಗೆ ಮುಕ್ತಾಯವಾಗುವ ಒಟ್ಟು 103 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ, ವಿವಿಧ ಕಾರಣಗಳಿಂದ ಹೈಕೋರ್ಟ್‌ನಲ್ಲಿರುವ 39 ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ ಉಳಿದ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ.

ಎರಡನೆ ಹಂತದಲ್ಲಿ ಒಟ್ಟು 8 ನಗರಸಭೆಗಳು, 33 ಪುರಸಭೆಗಳು ಹಾಗೂ 22 ಪಟ್ಟಣ ಪಂಚಾಯತ್ ಗಳಿಗೆ ಚುನಾವಣೆ ನಡೆಯಲಿದೆ. 1646 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 1998 ಮತಯಂತ್ರಗಳು ಹಾಗೂ ಕಂಟ್ರೋಲ್ ಯೂನಿಟ್‌ಗಳನ್ನು ಚುನಾವಣೆಗೆ ಬಳಕೆ ಮಾಡಲಾಗುತ್ತಿದೆ. 8230 ಮತಗಟ್ಟೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.

7.37 ಲಕ್ಷ ಪುರುಷರು ಹಾಗೂ 7.36 ಮಹಿಳೆಯರು, 181 ಇತರರು ಸೇರಿ 14.74 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. ಈಗಾಗಲೇ ವಿವಿಧ ಕಡೆಗಳಲ್ಲಿ ಸುಮಾರು 30 ವಾರ್ಡ್‌ಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 1296 ವಾರ್ಡ್‌ಗಳಿಗೆ ಮತದಾನ ನಡೆಯಲಿದ್ದು, 4360 ಅಭ್ಯರ್ಥಿಗಳು ಪರಸ್ಪರ ಸೆಣಸಲಿದ್ದಾರೆ.

ಕಾಂಗ್ರೆಸ್-1224, ಬಿಜೆಪಿ -1125, ಜೆಡಿಎಸ್ 780, ಸಿಪಿಎಂ 25, ಬಿಎಸ್ಪಿ 103, ಎಸ್‌ಡಿಪಿಐ-15, ಕೆಪಿಜೆಪಿ-4, ಸಮಾಜವಾದಿ ಪಕ್ಷ-2, ಎಐಎಂಐಎಂ-21, ವೆಲ್ಫೇರ್‌ ಪಾರ್ಟಿ-2 ಹಾಗೂ ಪಕ್ಷೇತರರು 1056 ವಾರ್ಡ್‌ಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.

ಬಿಬಿಎಂಪಿ ದಕ್ಷಿಣದ ಸಗಾಯಿಪುರ ವಾರ್ಡ್‌ನಲ್ಲಿ ಮೈತ್ರಿ ಪಕ್ಷದಿಂದ 1, ಬಿಜೆಪಿ-1 ಹಾಗೂ ಪಕ್ಷೇತರರು-2, ಬಿಬಿಎಂಪಿ ಉತ್ತರದ ಕಾವೇರಿಪುರ ವಾರ್ಡ್‌ನಿಂದ ಮೈತ್ರಿಯಿಂದ 1, ಬಿಜೆಪಿ 1 ಹಾಗೂ 11 ಪಕ್ಷೇತರರು ಸ್ಪರ್ಧಿಸುತ್ತಿದ್ದಾರೆ. ಹೆಬ್ಬಗೋಡಿ ಪುರಸಭೆಗೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ನಿಂದ ತಲಾ ಒಬ್ಬೊಬ್ಬರು ಸ್ಪರ್ಧಿಸಿದ್ದಾರೆ. ತುಮಕೂರು ಮಹಾನಗರ ಪಾಲಿಕೆಯ ಒಂದು ವಾರ್ಡ್‌ಗೆ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಹಾಗೂ ಬಿಎಸ್ಪಿ ತಲಾ ಒಬ್ಬೊಬ್ಬರು ಸ್ಪರ್ಧೆಯಲ್ಲಿದ್ದರೆ, ಪಕ್ಷೇತರರು ಮೂರು ಜನರಿದ್ದಾರೆ. ಬೆಳಗಾವಿ ಜಿಲ್ಲೆಯ ಸದಗಲ ಪುರಸಭೆಯ ಒಂದು ವಾರ್ಡ್‌ನಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಪೈಪೋಟಿಯಿದೆ. ಮುಗಳಖೋಡ ಪುರಸಭೆ ವಾರ್ಡ್‌ಗೆ 1 ಬಿಜೆಪಿ ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಒಟ್ಟು 32 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ನಾಳೆ(ಮೇ 29) ಬೆಳಗ್ಗೆ 7 ರಿಂದ ಸಂಜೆ 5 ರವರೆಗೂ ಮತದಾನ ನಡೆಯಲಿದೆ. ಮರು ಮತದಾನ ಅವಶ್ಯಕತೆಯಿದ್ದಲ್ಲಿ ಮೇ 30 ರಂದು ನಡೆಯಲಿದ್ದು, ಮೇ 31 ರಂದು ಬೆಳಗ್ಗೆ 8 ರಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News