ರಮೇಶ್ ಜಾರಕಿಹೊಳಿ ನಿವಾಸಕ್ಕೆ ಮಹೇಶ್ ಕುಮಟಳ್ಳಿ ಭೇಟಿ

Update: 2019-05-28 14:51 GMT

ಬೆಂಗಳೂರು, ಮೇ 29: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಬಂಡಾಯ ನಾಯಕ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ನಿನ್ನೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ನಡೆದಿರುವ ಮಾತುಕತೆಯ ವಿವರವನ್ನು ಹಂಚಿಕೊಂಡರು.

ಮಂಗಳವಾರ ನಗರದ ಸೆವೆನ್ ಮಿನಿಸ್ಟರ್ ಕ್ವಾಟ್ರರ್ಸ್‌ನಲ್ಲಿರುವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಮಾತುಕತೆ ವೇಳೆ ಮುಖ್ಯಮಂತ್ರಿ ಪ್ರಸ್ತಾಪಿಸಿದ ವಿಚಾರಗಳನ್ನು ಮಹೇಶ್ ಕುಮಟಳ್ಳಿ ತಿಳಿಸಿದರು.

ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್ ಕುಮಟಳ್ಳಿ, ಪದೇ ಪದೇ ಮುಖ್ಯಮಂತ್ರಿಯನ್ನು ಭೇಟಿ ಮಾಡೋಕೆ ಸಾಧ್ಯವೇ. ನಿನ್ನೆಯೇ ಅವರನ್ನು ಭೇಟಿ ಮಾಡಿದ್ದೇನೆ. ನನ್ನ ಅಥಣಿ ಮತಕ್ಷೇತ್ರದ ಬಗ್ಗೆ ಅವರ ಬಳಿ ಪ್ರಸ್ತಾಪಿಸಿದ್ದೇನೆ ಎಂದರು.

ಕೃಷ್ಣಾ ನದಿಗೆ ಕೋಯ್ನಾ ಜಲಾಶಯದಿಂದ ನೀರು ಹರಿಸಬೇಕು. ಮಹಾರಾಷ್ಟ್ರ ಹಾಗೂ ನಮ್ಮ ಸರಕಾರ ಈ ಸಂಬಂಧ ಒಪ್ಪಂದ ಮಾಡಿಕೊಳ್ಳಬೇಕು. ಹೀಗಾಗಿ, ನಾನು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಸುಮಾರು 500 ಕೋಟಿ ರೂ.ಗಳ ಲಿಫ್ಟ್ ಕೆಲಸಗಳು ನಮಗೆ ಆಗಬೇಕಿದೆ ಎಂದು ಅವರು ಹೇಳಿದರು.

ನಾನು ಪದೇ ಪದೇ ಹೇಳುತ್ತಲೇ ಇದ್ದೇನೆ, ನನಗೆ ಸಚಿವ ಸ್ಥಾನವೂ ಬೇಡ, ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವೂ ಬೇಡ. ಸರಕಾರದವರು ನನಗೆ ಕೊಟ್ಟರೂ ಬೇಡ. ನಮ್ಮದು ಯಾವುದೇ ಸಮಸ್ಯೆಗಳಿಲ್ಲ. ಪದೇ ಪದೇ ಮಾಧ್ಯಮಗಳು ಯಾಕೆ ನನ್ನ ವಿಚಾರವನ್ನು ಪ್ರಸ್ತಾಪ ಮಾಡುತ್ತಿವೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಮಹೇಶ್ ಕುಮಟಳ್ಳಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News