ಜೆಡಿಎಸ್ ಜೊತೆಗೆ ಹೊಂದಾಣಿಕೆಯಾಗದ ಕಾರಣ ಸೋಲು: ವೀರಪ್ಪ ಮೊಯ್ಲಿ

Update: 2019-05-28 15:03 GMT

ಬೆಂಗಳೂರು, ಮೇ 28: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಸರಿಹೋಗಿಲ್ಲ. ಹಾಗಾಗಿ, ನನ್ನ ಕ್ಷೇತ್ರದಲ್ಲಿ ನನಗೆ ಸೋಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಹಾಗೂ ರಾಷ್ಟ್ರದ ಹಿತದೃಷ್ಟಿಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮೈತ್ರಿಯಾಗಿದೆ. ಕೇವಲ ನಮ್ಮ ಮಧ್ಯೆ ಮೈತ್ರಿಯಾದರೆ ಸಾಲದು, ಕಾರ್ಯಕರ್ತರ ನಡುವೆಯೂ ಮೈತ್ರಿಯಾಗಬೇಕು ಎಂದರು.

ತಳಮಟ್ಟದಲ್ಲಿ ಮೈತ್ರಿ ಆದರೆ ಮಾತ್ರ ಎರಡೂ ಪಕ್ಷಗಳಿಗೆ ಲಾಭ ಆಗುತ್ತದೆ. ಕಾರ್ಯಕರ್ತರ ನಡುವೆ ಹೊಂದಾಣಿಕೆ ಆಗುವುದು ಮುಖ್ಯ. ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕಿತ್ತು. ಎರಡೂ ಪಕ್ಷಗಳ ನಾಯಕರು ಹೊಂದಾಣಿಕೆ ಜವಾಬ್ದಾರಿಯನ್ನು ನಿರ್ವಹಿಸಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸೂಕ್ತ ಹೊಂದಾಣಿಕೆ ಇದ್ದಿದ್ದರೆ ಇಂತಹ ಫಲಿತಾಂಶ ಬರುತ್ತಿರಲಿಲ್ಲ. ಸಮನ್ವಯತೆಯ ಕೊರತೆಯೇ ಈ ಫಲಿತಾಂಶಕ್ಕೆ ಕಾರಣ. ಮತೀಯ ಶಕ್ತಿಗಳನ್ನು ದೂರ ಇಡುವ ಉದ್ದೇಶದಿಂದ ಮೈತ್ರಿ ಸರಕಾರ ಉಳಿಯಬೇಕು. ಏನಾದರೂ ಸಣ್ಣ ಪುಟ್ಟ ತಪ್ಪುಗಳಾದರೆ ಅದನ್ನು ನಾವು ಸರಿಪಡಿಸಿಕೊಳ್ಳುತ್ತೇವೆ ಎಂದು ವೀರಪ್ಪ ಮೊಯ್ಲಿ ಹೇಳಿದರು.

ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹತಾಶರಾಗಿ ಯಡಿಯೂರಪ್ಪಆಪರೇಷನ್ ಕಮಲಕ್ಕೆ ಕೈಹಾಕಿದ್ದಾರೆ. ಮುಂದೆ ಆಪರೇಷನ್ ಕಮಲ ವಿಫಲವಾದಾಗ, ಯಡಿಯೂರಪ್ಪ ಕೂಡ ವಿಫಲವಾಗುತ್ತಾರೆ ಎಂದು ವೀರಪ್ಪ ಮೊಯ್ಲಿ ಹೇಳಿದರು.

ಲೋಕಸಭೆ ಚುನಾವಣೆಯ ಫಲಿತಾಂಶದ ಕುರಿತು ಪರಾಮರ್ಶೆ ಮಾಡುತ್ತೇವೆ. ಈ ಫಲಿತಾಂಶಕ್ಕೆ ಸ್ಪಷ್ಟ ಕಾರಣ ಹೇಳಲು ಸಾಧ್ಯವಿಲ್ಲ. ನನ್ನ ಕ್ಷೇತ್ರದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಸರಿ ಹೋಗಲಿಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ನಷ್ಟವಾಗಿದೆಯೇ ಹೊರತು, ಲಾಭವಾಗಿಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News