ಗೋರಕ್ಷಕರಿಂದ ಮಾಂಸ ವ್ಯಾಪಾರಿಯ ಹತ್ಯೆ ಪ್ರಕರಣ: ಹೆಚ್ಚಿನ ತನಿಖೆಗೆ ಆದೇಶಿಸಲು ಸುಪ್ರೀಂ ನಕಾರ

Update: 2019-05-28 16:17 GMT

ಹೊಸದಿಲ್ಲಿ, ಮೇ 28: 2018ರಲ್ಲಿ ಹಾಪುರ್‌ನಲ್ಲಿ ನಡೆದ ಮಾಂಸ ರಫ್ತು ವ್ಯಾಪಾರಿಯ ಹತ್ಯೆ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸುವಂತೆ ಉತ್ತರಪ್ರದೇಶ ಪೊಲೀಸರಿಗೆ ಆದೇಶಿಸಬೇಕೆಂಬ ಕೋರಿಕೆಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಹೆಚ್ಚಿನ ತನಿಖೆ ನಡೆಸಿ ಪೂರಕ ಆರೋಪಪಟ್ಟಿ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದರೆ ಅಲ್ಲಿ ನಿರ್ಧರಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರಿದ್ದ ರಜಾಕಾಲದ ನ್ಯಾಯಪೀಠವು ಅರ್ಜಿದಾರರಿಗೆ ತಿಳಿಸಿದೆ.

 2018ರ ಜೂನ್‌ನಲ್ಲಿ ತಥಾಕಥಿತ ಗೋರಕ್ಷಕರ ತಂಡವು ಮಾಂಸದ ರಫ್ತುದಾರ ಖಾಸಿಮ್ ಖುರೇಶಿ ಹಾಗೂ ಅವರ ಸಂಬಂಧಿ ಸಮಿಯುದ್ದೀನ್ ಮೇಲೆ ನಡೆಸಿದ್ದ ಮಾರಣಾಂತಿಕ ಹಲ್ಲೆಯಿಂದ ಖುರೇಶಿ ಮೃತಪಟ್ಟಿದ್ದು ಸಮಿಯುದ್ದೀನ್ ಗಂಭೀರ ಗಾಯಗೊಂಡಿದ್ದರು. ಈ ಪ್ರಕರಣದ ತನಿಖೆಯ ಮೇಲುಸ್ತುವಾರಿ ವಹಿಸುವಂತೆ ಕಳೆದ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಮೀರತ್‌ನ ಐಜಿಪಿಗೆ ಸೂಚಿಸಿತ್ತು. ಹಾಪುರ್‌ನ ಪ್ರಧಾನ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಎದುರು ಖುರೇಶಿಯ ಇಬ್ಬರು ಸಹೋದರರು ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಅವರು ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಪ್ರಕರಣದ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಸಮಿಯುದ್ದೀನ್ ಹೊಸದಾಗಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದರೆ ಅಲ್ಲಿ ಕಾನೂನಿನ ಪ್ರಕಾರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸುಪ್ರೀಂಕೋರ್ಟ್ ಅರ್ಜಿದಾರರಿಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News