ಹೆರಿಗೆ ನೋವಿನಿಂದ ಆಸ್ಪತ್ರೆಯ ನೆಲದಲ್ಲಿ ಚಡಪಡಿಸಿದ ಗರ್ಭಿಣಿ: ಆಘಾತಕಾರಿ ಘಟನೆಯ ವಿಡಿಯೋ ವೈರಲ್

Update: 2019-05-29 07:19 GMT

ಕೋಲಾರ, ಮೇ 29: ಇಲ್ಲಿನ ಕೆಜಿಎಫ್ ನ ಸರಕಾರಿ ಆಸ್ಪತ್ರೆಯ ನೆಲದಲ್ಲಿ ತುಂಬು ಗರ್ಭಿಣಿ ಮಹಿಳೆಯೊಬ್ಬರು ತೀವ್ರವಾದ ಹೆರಿಗೆ ನೋವಿನಿಂದ ಒದ್ದಾಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಮಹಿಳೆಯನ್ನು ನಾಲ್ಕು ಗಂಟೆಗಳ ತನಕ ಕಾಯಿಸಿ ಕೊನೆಗೂ ಯಾವುದೇ ವೈದ್ಯರು  ಚಿಕಿತ್ಸೆ ನೀಡದ ಕಾರಣ ಮಹಿಳೆಯನ್ನು ಬೇರೊಂದು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಗು ಮೃತಪಟ್ಟಿದೆ.

ಘಟನೆ ಸಂಬಂಧ ಕೆಜಿಎಫ್ ಆಸ್ಪತ್ರೆಯಲ್ಲಿ ಆ ಸಂದರ್ಭ ಕರ್ತವ್ಯದಲ್ಲಿದ್ದ ಸರ್ಜನ್ ಡಾ. ಶಿವಕುಮಾರ್  ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಮೇ 28, ಮಂಗಳವಾರ ನಡೆದ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಮನಕಲಕುವಂತಿದೆ.

ಕೋಲಾರ ನಿವಾಸಿ 22 ವರ್ಷದ ಸಮೀನಾಗೆ ಹೆರಿಗೆ ನೋವು ಆರಂಭವಾದಾಗ ಆಕೆಯ ಪತಿ ರಿಯಾಝ್ ಹಾಗೂ ಇತರ ಇಬ್ಬರು ಸಂಬಂಧಿ ಮಹಿಳೆಯರು ಆಕೆಯನ್ನು ಕೆಜಿಎಫ್ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಆದರೆ ಅಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಪರಮಾವಧಿ ಎಂಬಂತೆ ಆಕೆ ನೋವಿನಿಂದ ನರಳುತ್ತಿದ್ದರೂ ಯಾರೂ ಆಕೆಗೆ ಚಿಕಿತ್ಸೆ ನೀಡುವ ಗೋಜಿಗೆ ಹೋಗಿಲ್ಲ. ನಾಲ್ಕು ಗಂಟೆಗಳ ಕಾಲ ಕಾದು ಅಂತಿಮವಾಗಿ ಕುಟುಂಬ ಆಕೆಯನ್ನು ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಿತ್ತು. ಅಲ್ಲಿನ ವೈದ್ಯರು  ಸಮೀನಾಳ ಪ್ರಾಣ ಉಳಿಸಿದರೂ ಮಗುವನ್ನು ಕಾಪಾಡಲು ಅವರಿಗೆ ಸಾಧ್ಯವಾಗಿಲ್ಲ.

ಘಟನೆ ಬಗ್ಗೆ ತಿಳಿದು ಕೋಲಾರ ಬಿಜೆಪಿ ಸಂಸದ ಎಂ ಪಿ ಮುನಿಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ಸಮೀನಾರ ಆರೋಗ್ಯ ವಿಚಾರಿಸಿದ್ದಾರೆ. ಆಕೆಯ ಕುಟುಂಬ ಇನ್ನೂ ಪೊಲೀಸ್ ದೂರು ನೀಡಿಲ್ಲವಾದರೂ ದೂರು ನೀಡುವ ಬಗ್ಗೆ ಚಿಂತನೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News