ರಾಜ್ಯದಲ್ಲಿ ವಿದ್ಯುತ್ ದರ ಯೂನಿಟ್ ಗೆ 33 ಪೈಸೆ ಹೆಚ್ಚಳ

Update: 2019-05-30 12:15 GMT

ಬೆಂಗಳೂರು, ಮೇ 30: ಲೋಕಸಭಾ ಚುನಾವಣೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುತ್ತಿದ್ದಂತೆಯೇ ರಾಜ್ಯ ಸರಕಾರ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 33 ಪೈಸೆ ಹೆಚ್ಚಳ ಮಾಡಿದೆ.

ಚೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಹಾಗೂ ಬೆಸ್ಕಾಂಗಳ ಒಟ್ಟು ಐದು ವಿದ್ಯುತ್ ಪೂರೈಕೆ ಮಾಡುವ ಕಂಪನಿಗಳ ಪ್ರತಿ ಯೂನಿಟ್‌ಗೆ ಸರಾಸರಿ 33 ಪೈಸೆ ದರವನ್ನು ಹೆಚ್ಚಿಗೆ ಮಾಡಲಾಗಿದೆ. ಈಗಾಗಲೇ ಬರದಿಂದ ತತ್ತರಿಸುತ್ತಿರುವ ಜನರಿಗೆ ಮತ್ತೊಂದು ಬರೆ ಎಳೆದಂತಾಗಿದೆ.

ಕರ್ನಾಟಕ ವಿದ್ಯುತ್ ಸುಧಾರಣಾ ಆಯೋಗದ ಅಧ್ಯಕ್ಷ ಶಂಭುದಯಾಳ್ ಮೀನಾ ನೂತನ ದರವನ್ನು ಪ್ರಕಟಿಸಿ ಮಾತನಾಡಿ, ಬೆಂಗಳೂರು ವ್ಯಾಪ್ತಿಯ ಬೆಸ್ಕಾಂ, ಮೈಸೂರು ವ್ಯಾಪ್ತಿಯ ಚೆಸ್ಕಾಂ, ಮಂಗಳೂರು ವ್ಯಾಪ್ತಿಯ ಮೆಸ್ಕಾಂ, ಹುಬ್ಬಳ್ಳಿ ವ್ಯಾಪ್ತಿಯ ಹೆಸ್ಕಾಂ ಹಾಗೂ ಕಲಬುರಗಿ ವ್ಯಾಪ್ತಿಯ ಜೆಸ್ಕಾಂ ಒಟ್ಟು ಐದು ಕಂಪನಿಗಳಲ್ಲಿ ನೂತನ ದರ ಪರಿಷ್ಕರಣೆಯಾಗಲಿದೆ ಎಂದು ಹೇಳಿದರು.

ವೇತನ ಆಯೋಗದ ಶಿಫಾರಸಿನಂತೆ ಸಿಬ್ಬಂದಿಗಳ ವೇತನ ಹೆಚ್ಚಳ, ಸರಾಸರಿ ದರದಲ್ಲಿ ಶೇ.22ರಷ್ಟು ಏರಿಕೆ, ಬಂಡವಾಳ ಕಾಮಗಾರಿಗಳು ಸೇರಿದಂತೆ ಹಲವು ಕಾರಣಾಂತರಗಳಿಂದ ಸುಮಾರು 48,760 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿಯೊಂದಿಗೆ ಪ್ರತಿ ಯೂನಿಟ್‌ಗೆ 1ರೂ.ನಿಂದ 1.60 ಪೈಸೆ ದರ ಏರಿಕೆಗೆ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿದ್ದವು. ಎಸ್ಕಾಂಗಳ ಗರಿಷ್ಠ ಮಟ್ಟದ ಬೇಡಿಕೆ ತಿರಸ್ಕರಿಸಿರುವ ಕೆಇಆರ್‌ಸಿ 1960 ಕೋಟಿ ರೂ. ಆದಾಯ ಸಂಗ್ರಹಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 33 ಪೈಸೆ ದರ ಹೆಚ್ಚಳವಾಗುತ್ತಿದೆ. ದರ ಏರಿಕೆಯ ಸರಾಸರಿ ಪ್ರಮಾಣ ಶೇ.4.80ರಷ್ಟಾಗಿದೆ.

ಬೆಂಗಳೂರು ವ್ಯಾಪ್ತಿಯಲ್ಲಿ ಕಳೆದ ವರ್ಷ 2,932.24 ಕೋಟಿ, ಮಂಗಳೂರು ವ್ಯಾಪ್ತಿಯಲ್ಲಿ 706.39, ಚಾಮುಂಡೇಶ್ವರಿ ವ್ಯಾಪ್ತಿಯಲ್ಲಿ 630.75, ಹುಬ್ಬಳ್ಳಿ ವ್ಯಾಪ್ತಿಯಲ್ಲಿ 1,980.09 ಹಾಗೂ ಕಲಬುರಗಿ ವ್ಯಾಪ್ತಿಯಲ್ಲಿ 964.41 ಕೋಟಿ ಸೇರಿದಂತೆ ಒಟ್ಟು ವಿದ್ಯುತ್ ಕಂಪನಿಗಳಿಗೆ 7,217.88 ಕೋಟಿ ನಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಹೆಸ್ಕಾಂ ಕಂಪನಿಯು ಪ್ರತಿ ಯೂನಿಟ್‌ಗೆ 1.63 ಪೈಸೆ, ಮೆಸ್ಕಾಂ 1.38, ಚೆಸ್ಕಾಂ 1 ರೂ., ಜೆಸ್ಕಾಂ 1.27 ಪೈಸೆ ಏರಿಕೆ ಮಾಡುವಂತೆ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿತ್ತು.

ಹೊಸ ಉಷ್ಣವಿದ್ಯುತ್ ಕೇಂದ್ರಗಳಿಂದ ಖರೀದಿಸುವ ನವೀಕರಿಸಬಹುದಾದ ಇಂಧನಗಳ ಬೆಲೆ ಏರಿಕೆಯಾಗಿರುವುದರಿಂದ ದರ ಏರಿಸುವುದು ಅನಿವಾರ್ಯ ಎಂದು ಕೆಇಆರ್‌ಸಿ ಸಮರ್ಥಿಸಿಕೊಂಡಿದೆ.

ನೌಕರರ ವೇತನ ಪರಿಷ್ಕರಣೆ ಹಾಗೂ ನಿರ್ವಹಣಾ ವೆಚ್ವದಲ್ಲಿ ಶೇ.20ರಷ್ಟು ಏರಿಕೆಯಾಗಿರುವುದು, ಬಡ್ಡಿ ಮತ್ತು ಹಣಕಾಸು ವೆಚ್ಚದಲ್ಲಿ ಶೇ.12ರಷ್ಟು ಏರಿಕೆ, 2017-18ನೆ ಸಾಲಿನಲ್ಲಿ 2192.33 ಕೋಟಿ ರೂ.ಗಳು ನಷ್ಟವಾಗಿರುವುದರಿಂದ ಇದನ್ನು ಸರಿದೂಗಿಸಲು ಅನಿವಾರ್ಯವಾಗಿ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಶಂಬುದಾಯಾಳ್ ಮೀನಾ ಹೇಳಿದರು.

ಯಾವುದಕ್ಕೆ ಎಷ್ಟು ?

ಕೈಗಾರಿಕೆ: ಪ್ರತಿ ಯೂನಿಟ್‌ಗೆ 15-20 ಪೈಸೆ, ಪ್ರತಿ 500 ಯೂನಿಟ್‌ಗೆ 5.65 ರೂ. 1000 ಯೂನಿಟ್ ನಂತರ 6.95 ರೂ.(ಬ್ಯಾಂಕ್ ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ) 500 ಯೂನಿಟ್‌ಗಳಿಗೆ 5.35 ರೂ., 1000 ರವರೆಗೆ 6.30 ರೂ., 1 ಸಾವಿರ ಮೇಲ್ಪಟ್ಟು 6.60 ರೂ.

ವಾಣಿಜ್ಯ ಬಳಕೆ: ಪ್ರತಿ ಯೂನಿಟ್‌ಗೆ 25 ಪೈಸೆ. 50 ಯೂನಿಟ್‌ಗೆ 8 ರೂ., ಮೇಲ್ಪಟ್ಟ ಯೂನಿಟ್‌ಗೆ 9 ರೂ.,(ನಗರ ಪ್ರದೇಶದಲ್ಲಿ), 50 ಯೂನಿಟ್ ವರೆಗೆ 7.50, ಮೇಲ್ಪಟ್ಟು 8.50(ಗ್ರಾಮೀಣ ಪ್ರದೇಶದಲ್ಲಿ).

ಗ್ರಾಮೀಣ ಪ್ರದೇಶ: 30 ಯೂನಿಟ್ ವರೆಗೆ 3.69 ರೂ., 100 ಯೂನಿಟ್‌ವರೆಗೆ 4.90 ರೂ., 200 ಯೂನಿಟ್‌ವರೆಗೆ 6.45 ರೂ., 300 ಮೇಲ್ಪಟ್ಟು 7.30 ರೂ.ಗಳು.

ಗೃಹ ಬಳಕೆ: 30 ಯೂನಿಟ್ ವರೆಗೆ 3.75 ರೂ., 100 ಯೂನಿಟ್‌ವರೆಗೆ 5.20 ರೂ., 200 ಯೂನಿಟ್‌ವರೆಗೆ 6.25 ರೂ., 300 ಮೇಲ್ಪಟ್ಟು 7.80 ರೂ.ಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News