ಜಗನ್ ಮೋಹನ್ ಆಂಧ್ರಪ್ರದೇಶದ ಮುಖ್ಯ ಮಂತ್ರಿಯಾಗಿ ಪ್ರಮಾಣ

Update: 2019-05-30 14:44 GMT

ವಿಜಯವಾಡಾ,ಮೇ 30: ಆಂಧ್ರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿ (ವೈಎಸ್‌ಆರ್‌ಸಿಪಿ)ಯ ವರಿಷ್ಠ ವೈ.ಎಸ್.ಜಗನ್ಮೋಹನ ರೆಡ್ಡಿ ಅವರು ಗುರುವಾರ ಅಭಿಮಾನಿಗಳಿಂದ ಕಿಕ್ಕಿರಿದು ತುಂಬಿದ್ದ ಇಲ್ಲಿಯ ಇಂದಿರಾ ಗಾಂಧಿ ಮುನ್ಸಿಪಲ್ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿಯನ್ನು ಧೂಳೀಪಟಗೊಳಿಸಿರುವ ವೈಎಸ್‌ಆರ್ ಕಾಂಗ್ರೆಸ್ ಒಟ್ಟು 175 ಸ್ಥಾನಗಳ ಪೈಕಿ 151 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆಯೇರಿದೆ.

20,000ಕ್ಕೂ ಅಧಿಕ ಜನರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಿದ್ದು,ರೆಡ್ಡಿಯವರ ತಾಯಿ ವಿಜಯಲಕ್ಷ್ಮಿ,ಪತ್ನಿ ಭಾರತಿ,ಸೋದರಿ ಶರ್ಮಿಳಾ ಹಾಗೂ ಪುತ್ರಿಯರಾದ ಹರ್ಷಾ ರೆಡ್ಡಿ ಮತ್ತು ವರ್ಷಾ ರೆಡ್ಡಿ ಉಪಸ್ಥಿತರಿದ್ದರು.

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್,ಒಡಿಶಾ ಮುಖ್ಯಮಂತ್ರಿ ನವೀನ ಪಟ್ನಾಯಕ್,ಡಿಎಂಕೆ ವರಿಷ್ಠ ಎಂ.ಕೆ.ಸ್ಟಾಲಿನ್ ಮತ್ತು ಪುದುಚೇರಿಯ ಸಚಿವ ಮಲ್ಲಾದಿ ಕೃಷ್ಣನ್ ಅವರೂ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಮಾರಂಭಕ್ಕೆ ಜಗನ್ ಆಹ್ವಾನವನ್ನು ತಿರಸ್ಕರಿಸಿದ್ದ ಟಿಡಿಪಿ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಅಭಿನಂದನಾ ಸಂದೇಶದೊಂದಿಗೆ ಪಕ್ಷದ ಹಿರಿಯ ನಾಯಕರ ನಿಯೋಗವೊಂದನ್ನು ಅವರ ನಿವಾಸಕ್ಕೆ ಕಳುಹಿಸಿದ್ದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜಗನ್‌ರನ್ನು ಅಭಿನಂದಿಸಿ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News