ಸ್ಥಳೀಯ ಸಂಸ್ಥೆ ಚುನಾವಣೆ: ಬಹುತೇಕ ಕಡೆ ಅತಂತ್ರ ಫಲಿತಾಂಶ

Update: 2019-05-31 06:40 GMT

ಬೆಂಗಳೂರು, ಮೇ 31: ರಾಜ್ಯದ ಪುರಸಭೆ, ಪಟ್ಟಣ ಪಂಚಾಯತ್‌ಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆಯಿಂದ ನಡೆಯುತ್ತಿದ್ದು, ಬಹುತೇಕ ಫಲಿತಾಂಶ ಪ್ರಕಟಗೊಂಡಿದೆ. ಹೆಚ್ಚಿನ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸದ್ಯ ಯಾರಿಗೂ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿಯಿದೆ.

ಒಟ್ಟು 19 ಪಟ್ಟಣ ಪಂಚಾಯತ್‌ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಜಯಬೇರಿ ಬಾರಿಸಿದೆ. ಬಿಜೆಪಿ 8, ಕಾಂಗ್ರೆಸ್ 3 ಪಪಂನಲ್ಲಿ ಗೆಲುವು ಸಾಧಿಸಿದ್ದರೆ 8 ಕಡೆಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಪುರಸಭೆಯಲ್ಲಿ ಕಾಂಗ್ರೆಸ್ ಉತ್ತಮ ಫಲಿತಾಂಶ ದಾಖಲಿಸಿದೆ. ಒಟ್ಟು 30 ಪುರಸಭೆಗಳಲ್ಲಿ 12ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಬಿಜೆಪಿ 6 ಮತ್ತು ಜೆಡಿಎಸ್ 2ರಲ್ಲಿ ಜಯಿಸಿದೆ. ಉಳಿದಂತೆ 10 ಪುರಸಭೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಒಟ್ಟು 7 ನಗರಸಭೆಗಳಲ್ಲಿ 6ರ ಫಲಿತಾಂಶ ಪ್ರಕಟಗೊಂಡಿದ್ದು, ಒಂದರಲ್ಲಿ ಕಾಂಗ್ರೆಸ್ ಗೆಲುವು ಕಂಡಿದ್ದರೆ, 5 ನಗರಸಭೆಗಳು ಅತಂತ್ರವಾಗಿವೆ.

*ಸುಳ್ಯ ಪಪಂನಲ್ಲಿ ಬಿಜೆಪಿ ಜಯಭೇರಿ
ದ.ಕ. ಜಿಲ್ಲೆಯ ಸುಳ್ಯ ಪಟ್ಟಣ ಪಂಚಾಯತ್ ಬಿಜೆಪಿ ಪಾಲಾಗಿದೆ. ಇಲ್ಲಿ ಬಿಜೆಪಿ 14 ಸ್ಥಾನಗಳಲ್ಲಿ ಜಯಿಸಿದ್ದರೆ, ಕಾಂಗ್ರೆಸ್ 4 ಹಾಗೂ ಇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಮುಲ್ಕಿ ಪಪಂ ಅತಂತ್ರ
ಒಟ್ಟು 18 ಸ್ಥಾನಗಳಿರುವ ಮುಲ್ಕಿ ಪಟ್ಟಣ ಪಂಚಾಯತ್‌ನಲ್ಲಿ ಅತಂತ್ರ ಫಲಿತಾಂಶ ದಾಖಲಾಗಿದೆ. ಕಾಂಗ್ರೆಸ್ 9, ಬಿಜೆಪಿ 8 ಹಾಗೂ ಜೆಡಿಎಸ್ 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಮೂಡುಬಿದಿರೆ ಪುರಸಭೆ ಬಿಜೆಪಿ ತೆಕ್ಕೆಗೆ
23 ಸ್ಥಾನಗಳ ಮೂಡುಬಿದಿರೆ ಪುರಸಭೆಯಲ್ಲಿ 12 ಸ್ಥಾನಗಳನ್ನು ಜಯಿಸಿರುವ ಬಿಜೆಪಿ ಅಧಿಕಾ ಗಳಿಸಿದೆ. ಕಾಂಗ್ರೆಸ್ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಭಟ್ಕಳದಲ್ಲಿ ಪಕ್ಷೇತರರ ಮೇಲುಗೈ
ಭಟ್ಕಳ ಪುರಸಭೆಯಲ್ಲಿ ಪಕ್ಷೇತರರೇ ಮೇಲುಗೈ ಸಾಧಿಸಿದ್ದಾರೆ. 24 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷೇತರರು 19 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ 3 ಮತ್ತು ಬಿಜೆಪಿ 1 ಸ್ಥಾನದಲ್ಲಿ ಗೆಲುವು ಕಂಡಿದೆ.

 ಪಾವಗಡ ಪುರಸಭೆ: ಕಾಂಗ್ರೆಸ್‌ಗೆ ಭರ್ಜರಿ ಜಯ
ಪಾವಗಡ ಪುರಸಭೆಯಲ್ಲಿ ಕಾಂಗ್ರೆಸ್ 20 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಉಳಿದಂತೆ ಜೆಡಿಎಸ್ 2, ಪಕ್ಷೇತರರು 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ.

ತುಮಕೂರು ನಪಂ ಉಪ ಚುನಾವಣೆ: ಜೆಡಿಎಸ್‌ಗೆ ಗೆಲುವು
ತುಮಕೂರು ನಗರ ಪಂಚಾಯತ್‌ನ ವಾರ್ಡ್ ನಂ.22ಕ್ಕೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶ್ರೀನಿವಾಸ್ ಮೂರ್ತಿ ಗೆಲುವು ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News