ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆ, ಕಂಗಾಲಾದ ಜನತೆ

Update: 2019-05-31 13:55 GMT

ಬೆಂಗಳೂರು, ಮೇ 31: ರಾಜಧಾನಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪಾಟ್ನಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದ ಹಿನ್ನೆಲೆ ಶುಕ್ರವಾರ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.

ಬೆಳಗ್ಗೆ 8:45ರ ಸುಮಾರಿಗೆ ಪ್ಲಾಟ್ ಫಾರಂ 1ರಲ್ಲಿ ನಿಲುಗಡೆಗೊಂಡಿದ್ದ ಪಾಟ್ನಾ ಎಕ್ಸ್‌ಪ್ರೆಸ್ ರೈಲು ಹೊರಡಲು ಸಿದ್ಧವಾಗಿರುವಾಗ ವ್ಯಕ್ತಿಯೊಬ್ಬರು ಬಾಂಬ್ ಇದೆ ಎಂದು ಜೋರಾಗಿ ಕೂಗಿಕೊಂಡರು. ಇದನ್ನು ಕೇಳಿದ ಪ್ರಯಾಣಿಕರು, ಗಾಬರಿಗೊಂಡು ದಿಢೀರ್ ಕೆಳಗಿಳಿದು ಓಡಲಾರಂಭಿಸಿದರು.

ವಿಷಯ ತಿಳಿದ ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಎಲ್ಲ ಪ್ರಯಾಣಿಕರನ್ನು ಸುಗಮವಾಗಿ ಇಳಿಸಲು ನೆರವಾದರು. ನಂತರ ಬಾಂಬ್ ನಿಷ್ಕ್ರಿಯದಳ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರೆನೇಡ್?: ಸ್ಥಳದಲ್ಲಿ ಗ್ರೆನೇಡ್ ಮಾದರಿಯ ನಿಗೂಢ ವಸ್ತುವೊಂದು ಮರಳು ತುಂಬಿದ ಚೀಲಗಳ ಮಧ್ಯೆ ಇರುವುದು ಪತ್ತೆಯಾಗಿದ್ದು, ಕೂಡಲೆ ಅದನ್ನು ವಶಕ್ಕೆ ಪಡೆದ ಪೊಲೀಸರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಇದು ಕಂಟ್ರಿ ಮೇಡ್ ಗ್ರೆನೇಡ್ ಮಾದರಿ ವಸ್ತುವಾಗಿದ್ದು, ಇದನ್ನು ಯಾರು ತಂದು ಇಟ್ಟಿದ್ದಾರೆ ಎಂಬುದರ ಬಗ್ಗೆ ರೈಲು ನಿಲ್ದಾಣದ ಸುತ್ತಮುತ್ತ ಸಿಸಿಟಿವಿ ಕ್ಯಾಮರಾ ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂಬ ವದಂತಿ ಹರಡುತ್ತಿದ್ದಂತೆ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ದಿಕ್ಕಾಪಾಲಾಗಿ ಓಡಿದ್ದರಿಂದ ಕೆಲಕಾಲ ರೈಲ್ವೆ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯಿಂದಾಗಿ ಕೆಲ ರೈಲುಗಳ ಸಂಚಾರದಲ್ಲಿ ಕೆಲಕಾಲ ವಿಳಂಬವಾಗಿದ್ದು ಕಂಡುಬಂದಿತು.

‘ತೀವ್ರ ತಪಾಸಣೆ’
ರೈಲ್ವೆ ನಿಲ್ದಾಣದಲ್ಲಿ ಗ್ರೆನೇಡ್ ಪತ್ತೆಯಾದ ಹಿನ್ನೆಲೆ ಬೆಂಗಳೂರಿನ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರಮುಖವಾಗಿ ಯಶವಂತಪುರ, ದಂಡು ರೈಲ್ವೆ ನಿಲ್ದಾಣ ಸೇರಿದಂತೆ ಮುಖ್ಯ ರೈಲ್ವೆ ನಿಲ್ದಾಣಗಳಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ.

ಡಮ್ಮಿ ಗ್ರೈನೇಡ್
‘ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲ್ವೆ ನಿಲ್ದಾಣದ ಫ್ಲಾಟ್ ಪಾರಂ-1ರಲ್ಲಿ ಪತ್ತೆಯಾಗಿರುವುದು ಸ್ವದೇಶಿ ನಿರ್ಮಿತ ‘ಡಮ್ಮಿ ಗ್ರೆನೇಡ್’ ಆಗಿದ್ದು, ಅದರಲ್ಲಿ ಯಾವುದೇ ಸ್ಫೋಟಕ ಇರಲಿಲ್ಲ. ಹೀಗಾಗಿ ಜನರು ಆತಂಕಗೊಳ್ಳುವ ಅಗತ್ಯವಿಲ್ಲ. ಈ ಪ್ರಕರಣವನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ರೈಲ್ವೆ, ಬಸ್ ನಿಲ್ದಾಣ ಸೇರಿ ನಗರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದು, ಅಗತ್ಯ ಮುನ್ನಚ್ಚರಿಕೆಗೆ ಸೂಚಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಕ್ರಮ ಕೈಗೊಳ್ಳಲಾಗಿದೆ’
-ಎಂ.ಬಿ.ಪಾಟೀಲ್, ಗೃಹ ಸಚಿವ

‘ಬಾಂಬ್ ಮಾದರಿ ವಸ್ತು ಪ್ರಯೋಗಾಲಯಕ್ಕೆ’
ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪತ್ತೆಯಾಗಿರುವ ಬಾಂಬ್ ಮಾದರಿ ವಸ್ತು ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ಇದರಲ್ಲಿರುವ ವಸ್ತುಗಳ ಬಗ್ಗೆ ಮಾಹಿತಿ ಪಡೆಯಲಾಗುವುದೆಂದು ರೈಲ್ವೆ ವಿಭಾಗದ ಎಡಿಜಿಪಿ ಅಲೋಕ್ ಮೋಹನ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ತೆಯಾಗಿರುವ ಅನುಮಾನಾಸ್ಪದ ವಸ್ತುವಿನಲ್ಲಿ ಬಾಂಬ್‌ಗೆ ಬಳಸಲಾಗುವ ವಸ್ತುಗಳೂ ಇವೆ. ಆದರೆ, ಯಾವ ವಸ್ತು ಎಂಬುದು ಸದ್ಯಕ್ಕೆ ತಿಳಿಯುತ್ತಿಲ್ಲ ಎಂದರು.

ಬಾಂಬ್ ಮಾದರಿ ವಸ್ತು ಸಿಕ್ಕಿದ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾ ಕೆಲಸ ಮಾಡುತ್ತಿಲ್ಲ. ಆದರೆ, ಬೇರೆ ಕಡೆಗಳಲ್ಲಿ ಇರುವ ಕ್ಯಾಮರಾಗಳಲ್ಲಿ ಇರುವ ವಿಡಿಯೋವನ್ನು ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರಾಜ್ಯ ಗುಪ್ತಚರ ಇಲಾಖೆ, ನಗರ ಪೊಲೀಸರು, ಜಿಆರ್‌ಪಿ, ಆರ್‌ಎಎಫ್ ಪೊಲೀಸರನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಈ ತಂಡ ತನಿಖೆ ನಡೆಸುತ್ತಿದೆ ಎಂದು ಎಡಿಜಿಪಿ ಅಲೋಕ್ ಮೋಹನ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News